ಒಡಿಶಾ: ಸುಮಾರು 12 ಗಂಟೆಗಳಿಗೂ ಹೆಚ್ಚು ಕಾಲ ಬೃಹತ್ ಕಲ್ಲು ಬಂಡೆಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದ ಬಾಲಕನನ್ನು ಒಡಿಶಾದಲ್ಲಿ (odisha) ರಕ್ಷಿಸಲಾಗಿದೆ. ನಯಾಗಢ ಜಿಲ್ಲೆಯ (Nayagarh district) ಕಾನಿಪಾದ ಕಾಡಿಗೆ ( Kanipada forest) ಜೇನುತುಪ್ಪ (Honey) ಸಂಗ್ರಹಿಸಲೆಂದು ಹೋಗಿದ್ದ 14 ವರ್ಷದ ಬಾಲಕ ಬೃಹತ್ ಬಂಡೆಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದನು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ತಂಡಗಳು ಸತತ 7 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿದವು. ಅಪಾಯಕಾರಿ ಭೂಪ್ರದೇಶದಲ್ಲಿ ಹೈಡ್ರಾಲಿಕ್ ಉಪಕರಣಗಳನ್ನು ಬಳಸಿ ಬಾಲಕನನ್ನು ರಕ್ಷಿಸಲಾಗಿದ್ದು, ರಕ್ಷಣಾ ತಂಡಗಳ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ (CM Mohan Charan Majhi) ಶ್ಲಾಘಿಸಿದ್ದಾರೆ.
ಹೇಗಿತ್ತು ಕಾರ್ಯಾಚರಣೆ?
ಕಾನಿಪಾದ ಅರಣ್ಯ ಪ್ರದೇಶದಲ್ಲಿ ಜೇನುತುಪ್ಪ ಸಂಗ್ರಹಿಸುತ್ತಿದ್ದ ಬಾಲಕ ಹಲವಾರು ಗಂಟೆಗಳ ಕಾಲ ಕಿರಿದಾದ ಕಲ್ಲಿನ ಬಿರುಕಿನೊಳಗೆ ಸಿಕ್ಕಿಹಾಕಿಕೊಂಡಿದ್ದನು. ದೊಡ್ಡ ಬಂಡೆಗಳ ನಡುವೆ ಜಾರಿ ಬಿದ್ದಿದ್ದ ಬಾಲಕನ ತಲೆ ಆಳವಾದ ಕಲ್ಲಿನ ಗುಂಡಿಯೊಳಗೆ ಬಿಗಿಯಾಗಿ ಸಿಲುಕಿಕೊಂಡಿತು. ಚಲಿಸಲು, ಬಿಡಿಸಿಕೊಳ್ಳಲು ಸಾಧ್ಯವಾಗದೆ ಇದ್ದುದರಿಂದ ಐದು ಗಂಟೆಗಳಿಗೂ ಹೆಚ್ಚು ಕಾಲ ಬಾಲಕ ಅದರಲ್ಲಿ ಸಿಲುಕಿಕೊಂಡಿದ್ದನು. ಸ್ಥಳೀಯರು ಪ್ರಯತ್ನಿಸಿ ಸಾಧ್ಯವಾಗದೇ ಇದ್ದಾಗ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಓಡಗಾಂವ್ ಮತ್ತು ನಾಯಗಢದ ಅಗ್ನಿಶಾಮಕ ಸೇವೆ ಮತ್ತು ತುರ್ತು ಪ್ರತಿಕ್ರಿಯೆ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡವು.
ಅಸ್ಥಿರವಾದ ಬಂಡೆಗಳು, ಅಸಮ ನೆಲ, ಬಂಡೆಗಳು ಕುಸಿಯುವ, ವಿಷಪೂರಿತ ಹಾವುಗಳಿರುವ ಭಯದ ನಡುವೆ ಅಪಾಯಕಾರಿ ಪರಿಸ್ಥಿತಿಯ ನಡುವೆ ಬಾಲಕನಿಗೆ ಗಾಯವಾಗದಂತೆ ಎಚ್ಚರಿಕೆ ವಹಿಸಲು ಸಾಕಷ್ಟು ತಯಾರಿ ಮಾಡಿಕೊಂಡ ತಂಡ ಭಾರವಾದ ಬಂಡೆಗಳನ್ನು ಎತ್ತಲು ಸುಧಾರಿತ ಉಪಕರಣಗಳನ್ನು ಬಳಸಿದರು. ಬಳಿಕ ಹೈಡ್ರಾಲಿಕ್ ಜ್ಯಾಕ್ ವ್ಯವಸ್ಥೆ ಮತ್ತು ವಿಶೇಷ ಯಂತ್ರೋಪಕರಣಗಳನ್ನು ಬಳಸಿ ಬಾಲಕನ ಸುತ್ತ ಇದ್ದ ಬಂಡೆಗಳನ್ನು ತೆರವುಗೊಳಿಸಲಾಯಿತು. ಕಾರ್ಯಾಚರಣೆಯ ಉದ್ದಕ್ಕೂ ರಕ್ಷಣಾ ತಂಡವು ಬಾಲಕ ಗಾಬರಿಯಾಗದಂತೆ ಶಾಂತವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಇರುವಂತೆ ನೋಡಿಕೊಂಡಿತ್ತು. ಸುಮಾರು ಏಳು ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು.
ಮುಖ್ಯಮಂತ್ರಿ ಶ್ಲಾಘನೆ
ಘಟನೆಯ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಅಗ್ನಿಶಾಮಕ ದಳ, ತುರ್ತು ಸೇವಾ ತಂಡಗಳನ್ನು ಶ್ಲಾಘಿಸಿದರು. ಬಾಲಕನ ಅಸಹಾಯಕ ಸ್ಥಿತಿಯಿಂದ ಬಾಲಕನನ್ನು ರಕ್ಷಿಸಿದ ಸಿಬ್ಬಂದಿಯ ಧೈರ್ಯ ಮತ್ತು ವೃತ್ತಿಪರ ಪರಿಣತಿಯನ್ನು ಅವರು ಮೆಚ್ಚಿ ಮಾಡಿರುವ ಪೋಸ್ಟ್ ಗೆ ಸಾಕಷ್ಟು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.