ಮುಂಬೈ, ಆ. 29: ರಕ್ಷಾ ಬಂಧನ ಹಬ್ಬದಂದು (Raksha Bandhan) 17 ವರ್ಷದ ಹದಿಹರೆಯದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ (Maharashtra) ಜಲಗಾಂವ್‌ನಲ್ಲಿ ನಡೆದಿದೆ. ʼʼರಕ್ಷಾ ಬಂಧನದ ಶುಭಾಶಯಗಳು ಸಹೋದರಿ. ದಯವಿಟ್ಟು ಅಮ್ಮ-ಅಪ್ಪನನ್ನು ಒಂಟಿಯಾಗಿ ಬಿಡಬೇಡʼʼ ಎಂದು ಹೇಳಿ ಆತ್ಮಹತ್ಯೆ (Self-harming) ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ರೋಹಿತ್ ಸಾಹೇಬ್ರಾವ್ ಧಂಗರ್ ಎಂದು ಗುರುತಿಸಲಾಗಿದೆ. ಆತ 11ನೇ ತರಗತಿ ವಿದ್ಯಾರ್ಥಿಯಾಗಿದ್ದ.
ರಕ್ಷಾ ಬಂಧನ ದಿನದಂದು (ಶುಕ್ರವಾರ) ಆತ ತನ್ನ ತಂದೆಯೊಂದಿಗೆ ಸಹೋದರಿಯನ್ನು ಭೇಟಿಯಾಗಿದ್ದ. ಮನೆಗೆ ಹಿಂದಿರುಗುವ ಮೊದಲು ತನ್ನ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡಿದ್ದ. ಮನೆಗೆ ತಲುಪಿದ ನಂತರ, ರೋಹಿತ್ ತನ್ನ ಸಹೋದರಿಯೊಂದಿಗಿನ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಭಾವನಾತ್ಮಕ ಸಂದೇಶ ಬರೆದಿದ್ದ. ಪೋಸ್ಟ್‌ನಲ್ಲಿ, ʼʼಸಹೋದರಿ, ಎಲ್ಲವನ್ನೂ ನಿಭಾಯಿಸು. ಅಮ್ಮ ಮತ್ತು ಅಪ್ಪನನ್ನು ಒಂಟಿಯಾಗಿ ಬಿಡಬೇಡ. ನಾನು ಹೊರಡುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾನೆ.
ಸಹೋದರಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ:
ಪ್ರಾಥಮಿಕ ಮಾಹಿತಿಯ ಪ್ರಕಾರ, ರೋಹಿತ್ ತನ್ನ ಸ್ನೇಹಿತನಿಗೆ ವಿಡಿಯೊ ಸಂದೇಶ ಕಳುಹಿಸಿದ್ದು, ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡಿರುವುದಾಗಿ ಹೇಳಿದ್ದಾನೆ. ಸಂದೇಶದಿಂದ ಗಾಬರಿಗೊಂಡ ಸ್ನೇಹಿತ ಮತ್ತು ಇತರರು ಅವನ ಮನೆಗೆ ಧಾವಿಸಿದಾಗ ರೋಹಿತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರಿ ಯುವತಿ ಆತ್ಮಹತ್ಯೆ!
ಆತನ ಕುಟುಂಬ ತಕ್ಷಣ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿತು. ಅಲ್ಲಿ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ರೋಹಿತ್ ಮತ್ತೊಂದು ಭಾವನಾತ್ಮಕ ಸ್ಟೇಟಸ್ ಪೋಸ್ಟ್ ಮಾಡಿದ್ದ. ಅದರಲ್ಲಿ, ʼʼನಾನು ಮುಂದಿನ ಬಾರಿ ಹಿಂತಿರುಗಿದಾಗ, ಎಲ್ಲರ ನೆಚ್ಚಿನವನಾಗುತ್ತೇನೆ. ಯಾರ ಕಣ್ಣುಗಳು ತೇವವಾಗುವುದಿಲ್ಲ. ನಾನು ಯಾರ ಹೃದಯದಿಂದ ಏನನ್ನೂ ಕಿತ್ತುಕೊಳ್ಳುವುದಿಲ್ಲʼʼ ಎಂದು ಬರೆದಿದ್ದ. ಇನ್ನು ಈ ಸಂಬಂಧ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.