ವಾಷಿಂಗ್ಟನ್: ಅಮೆರಿಕದ ಪ್ರತಿಷ್ಠಿತ ಐವಿ ಲೀಗ್ ಸಂಸ್ಥೆಯಾದ ಬ್ರೌನ್ ವಿಶ್ವವಿದ್ಯಾಲಯದಲ್ಲಿ (Brown University) ಶನಿವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ(Shoot Out) ಇಬ್ಬರು ವಿದ್ಯಾರ್ಥಿಗಳು(Students Death) ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ( 8 Students Injured) ಎಂದು ರೋಡ್ ಐಲ್ಯಾಂಡ್ ರಾಜ್ಯದ ಪ್ರಾವಿಡೆನ್ಸ್ ಮೇಯರ್ ಬ್ರೆಟ್ ಸ್ಮೈಲಿ ಅಧಿಕೃತವಾಗಿ ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಬರಸ್ ಮತ್ತು ಹೋಲಿ ಎಂಜಿನಿಯರಿಂಗ್ ಕಟ್ಟಡದಲ್ಲಿ ಈ ವಿದ್ರಾವಕ ಘಟನೆ ನಡೆದಿದೆ. ಏಳು ಮಹಡಿಗಳಿರುವ ಈ ಕಟ್ಟಡದಲ್ಲಿ 100ಕ್ಕೂ ಹೆಚ್ಚು ಪ್ರಯೋಗಾಲಯಗಳು, ತರಗತಿಗಳು ಹಾಗೂ ಕಚೇರಿಗಳಿದ್ದು, ದಾಳಿ ನಡೆದ ಸಮಯದಲ್ಲಿ ಎಂಜಿನಿಯರಿಂಗ್ ವಿಭಾಗದ ಪರೀಕ್ಷೆಗಳು ನಡೆಯುತಿತ್ತು ಎಂದು ತಿಳಿದುಬಂದಿದೆ.
ಗುಂಡಿನ ದಾಳಿ ನಡೆದ ತಕ್ಷಣ ಕ್ಯಾಂಪಸ್‌ನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವಸತಿ ನಿಲಯಗಳು, ತರಗತಿಗಳು ಹಾಗೂ ಪ್ರಯೋಗಾಲಯಗಳಲ್ಲಿ ಅಡಗಿಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವಿಶ್ವವಿದ್ಯಾಲಯ ಆಡಳಿತವು ತಕ್ಷಣವೇ ‘ಶೆಲ್ಟರ್ ಇನ್ ಪ್ಲೇಸ್’ ಎಂಬ ಎಚ್ಚರಿಕೆಯನ್ನು ಘೋಷಣೆಯನ್ನು ಮಾಡಿದೆ.
ಪಾಕಿಸ್ತಾನಕ್ಕೆ ಗೂಢಚಾರಿಕೆ ಆರೋಪ: ಅಸ್ಸಾಂನಲ್ಲಿ ನಿವೃತ್ತ ವಾಯುಪಡೆ ಅಧಿಕಾರಿಯ ಬಂಧನ
ಬ್ರೌನ್ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಈ ಬಗ್ಗೆ ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು,
“ಬರಸ್ ಮತ್ತು ಹೋಲಿ ಎಂಜಿನಿಯರಿಂಗ್ ಕಟ್ಟಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿರುವುದನ್ನು ನಾವು ದೃಢಪಡಿಸಿದ್ದೇವೆ. ಇತರೆ ಎಂಟು ಮಂದಿ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ” ಎಂದು ತಿಳಿಸಿದೆ.
ಪ್ರಾವಿಡೆನ್ಸ್ ಪೊಲೀಸ್ ಇಲಾಖೆಯು ದಾಳಿ ಬಗ್ಗೆ ಮಾಹಿತಿ ನೀಡಿದ್ದು, ಶಂಕಿತನ ಬಗ್ಗೆ ಮಾಹಿತಿ ಕಲೆ ಹಾಕಿದೆ. ಆರೋಪಿ ಕಪ್ಪು ಬಟ್ಟೆ ಧರಿಸಿದ್ದ ಎನ್ನಲಾಗಿದ್ದು, ದಾಳಿ ನಡೆಸಿದ ಬಳಿಕ ಕಟ್ಟಡದಿಂದ ಹೊರಟು ಹೋಗಿರುವುದಾಗಿ ತಿಳಿದುಬಂದಿದೆ. ಆರಂಭದಲ್ಲಿ ವಶಕ್ಕೆ ಪಡೆದಿದ್ದ ಒಬ್ಬ ವ್ಯಕ್ತಿಗೆ ಈ ದಾಳಿಯೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ನಂತರ ಸ್ಪಷ್ಟಪಡಿಸಲಾಗಿದೆ.
ಮೇಯರ್ ಬ್ರೆಟ್ ಸ್ಮೈಲಿ ಮಾತನಾಡಿ,
“ಶಂಕಿತನನ್ನು ಪತ್ತೆಹಚ್ಚಲು ಎಲ್ಲಾ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಲಾಗುತ್ತಿದೆ. ಪರಿಸ್ಥಿತಿ ಸುರಕ್ಷಿತವಾಗಿದೆ ಎಂದು ಘೋಷಿಸುವವರೆಗೆ ಸಾರ್ವಜನಿಕರು ಮನೆಯೊಳಗೇ ಉಳಿಯಬೇಕು” ಎಂದು ಮನವಿ ಮಾಡಿದ್ದಾರೆ.
ಈ ಘಟನೆಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ,
“ಗುಂಡಿನ ದಾಳಿಯ ಬಗ್ಗೆ ನನಗೆ ಮಾಹಿತಿ ನೀಡಲಾಗಿದೆ. ಎಫ್‌ಬಿಐ ತಂಡ ಈಗಾಗಲೇ ಸ್ಥಳದಲ್ಲಿದೆ. ಬಲಿಯಾದವರಿಗೂ ಅವರ ಕುಟುಂಬಗಳಿಗೂ ದೇವರು ಆಗಿರುವ ನಷ್ಟವನ್ನು ಎದುರಿಸುವ ಶಕ್ತಿಯನ್ನು ನೀಡಲಿ” ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಶಂಕಿತನು ಬಂಧನದಲ್ಲಿಲ್ಲ ಎಂದು ಮೊದಲು ನೀಡಿದ್ದ ಮಾಹಿತಿಯನ್ನು ಪೊಲೀಸರು ತಿದ್ದುಪಡಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಈ ಕುರಿತು ಪ್ರತಿಕ್ರಿಯಿಸಿ, ರೋಡ್ ಐಲ್ಯಾಂಡ್‌ನ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿಕಟವಾಗಿ ಗಮನಿಸುತ್ತಿದ್ದು, ಅಗತ್ಯವಿದ್ದರೆ ಎಫ್‌ಬಿಐ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಕ್ಯಾಂಪಸ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.