ಮಹಾರಾಷ್ಟ್ರ: ಮಗಳಿಗಾಗಿ 5 ಲಕ್ಷ ರೂ. ನೀಡಿ ನೀಟ್ ಪ್ರಶ್ನೆ (NEET Paper) ಪತ್ರಿಕೆ ಖರೀದಿ ಮಾಡಿದ್ದ ವ್ಯಕ್ತಿಯೊಬ್ಬನ ಮನೆಗೆ ಕೇಂದ್ರ ತನಿಖಾ ದಳ (Central Bureau of Investigation) ದಾಳಿ ಮಾಡಿದ್ದು ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದೆ. ಮಹಾರಾಷ್ಟ್ರದ (maharastra) ನಾಂದೇಡ್‌ನ ಭೌರಾವ್ ಕದಮ್ ಎಂಬವರ ಮನೆಗೆ ಸಿಬಿಐ ದಾಳಿ ನಡೆಸಿದೆ. ನೀಟ್-ಯುಜಿ 2026ರ (NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಸಿಬಿಐ (CBI) ತನಿಖೆಯನ್ನು ಪ್ರಾರಂಭಿಸಿದ್ದು, ಈ ಸಂದರ್ಭದಲ್ಲಿ ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿವೆ.
ಮೇ 3ರಂದು ನಡೆದ 2026ರ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಭೌರಾವ್ ಕದಮ್ ಎಂಬವರ ಮನೆಗೆ ಸಿಬಿಐ ದಾಳಿ ನಡೆಸಿದೆ. ಭೌರಮ್ ಅವರು ನಡೆದ ಪರೀಕ್ಷೆಗೆ ಮುಂಚಿತವಾಗಿ ಮಗಳಿಗೆಂದು 5 ಲಕ್ಷ ರೂ. ಗಳನ್ನು ನೀಡಿ ಸೋರಿಕೆಯಾದ ಪ್ರಶ್ನೆ ಪತ್ರಿಕೆ ಖರೀದಿ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ 2026ರ ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಮರು ಪರೀಕ್ಷೆಯನ್ನು ಜೂನ್ 21ರಂದು ನಿಗದಿಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖಾ ಸಂಸ್ಥೆಗಳು ಹಲವಾರು ವ್ಯಕ್ತಿಗಳನ್ನು ಬಂಧಿಸಿದ್ದು ವಿಚಾರಣೆಯನ್ನು ಮುಂದುವರಿಸಿದೆ.
ನಾಂದೇಡ್‌ನ ವಿದ್ಯುತ್‌ನಗರ ಪ್ರದೇಶದಲ್ಲಿರುವ ಭೌರಾವ್ ಕದಮ್ ಅವರ ಮನೆಗೆ ದಾಳಿ ನಡೆಸಿದ ತನಿಖಾಧಿಕಾರಿಗಳು ಸುಮಾರು ಎಂಟು ಗಂಟೆಗಳ ಕಾಲ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದರು. ಹಲವಾರು ದಾಖಲೆಗಳು, ವಸ್ತುಗಳನ್ನು ಪರಿಶೀಲಿಸಿದರು ಮತ್ತು ಕುಟುಂಬ ಸದಸ್ಯರನ್ನು ಕೂಡ ವಿಚಾರಣೆ ನಡೆಸಿದರು. ಇದರ ಬಳಿಕ ಕದಮ್ ಮತ್ತು ಅವರ ಕುಟುಂಬದ ಸದಸ್ಯರನ್ನು ಹೆಚ್ಚಿನ ವಿಚಾರಣೆಗಾಗಿ ಪುಣೆಯಲ್ಲಿ ಏಜೆನ್ಸಿಯ ಮುಂದೆ ಹಾಜರಾಗಲು ಅಧಿಕಾರಿಗಳು ನಿರ್ದೇಶಿಸಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಲಾತೂರ್‌ನಲ್ಲಿರುವ ಕೋಚಿಂಗ್ ಇನ್‌ಸ್ಟಿಟ್ಯೂಟ್ ಪ್ರವರ್ತಕರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದು, ಇದರ ಒಂದು ದಿನದ ಬಳಿಕ ಕದಮ್ ಅವರ ಮನೆಗೆ ದಾಳಿ ನಡೆಸಲಾಯಿತು.
ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪುಣೆ, ಲಾತೂರ್ ಮತ್ತು ನಾಂದೇಡ್ ನ ಹಲವಾರು ಮಂದಿ ಸಂಬಂಧ ಹೊಂದಿರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಇದರಲ್ಲಿ ನೀಟ್ ಆಕಾಂಕ್ಷಿಗಳು ಮತ್ತು ಅವರ ಪೋಷಕರು ಪ್ರಶ್ನೆ ಪತ್ರಿಕೆಯನ್ನು ಮುಂಚಿತವಾಗಿ ಪಡೆಯಲು ಹಣ ಪಾವತಿಸಿದ್ದಾರೆಯೇ ಎಂಬುದನ್ನು ಸಿಬಿಐ ತನಿಖೆ ನಡೆಸುತ್ತಿದೆ.
ಮೇ 3ರಂದು ನಡೆದ 2026ರ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸುಮಾರು 22 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇದರ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ ಜೂನ್ 21ರಂದು ಮತ್ತೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಮೊದಲು ರಾಜಸ್ಥಾನದಲ್ಲಿ ವರದಿಯಾಗಿದ್ದು, ಇಲ್ಲಿನ ಉಪನ್ಯಾಸಕರೊಬ್ಬರು ಇದರಲ್ಲಿ ಭಾಗಿಯಾಗಿರುವುದು ಕೂಡ ತನಿಖೆ ವೇಳೆ ಬಹಿರಂಗವಾಗಿದೆ. ಜೊತೆಗೆ ರಾಷ್ಟ್ರೀಯ ಪರೀಕ್ಷಾ ಕೇಂದ್ರದೊಂದಿಗೆ ಸಂಬಂಧ ಹೊಂದಿರುವ ಅಧಿಕಾರಿಯೊಬ್ಬರು ಕೂಡ ಇದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪವಿದೆ.