ಚಿಕ್ಕಬಳ್ಳಾಪುರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಚಡ್ಡಿ ಗ್ಯಾಂಗ್ (Robbery Case) ಇದೀಗ ಚಿಕ್ಕಬಳ್ಳಾಪುರ ಪ್ರತ್ಯಕ್ಷವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಚಡ್ಡಿಗ್ಯಾಂಗ್ ದರೋಡೆಗೆ ಸಂಚು ಹಾಕುತ್ತಿದ್ದ ವಿಡಿಯೋ ಸಿಸಿಟಿಯಲ್ಲಿ ಸೆರೆಯಾಗಿದೆ. ಗೌರಿಬಿದನೂರು ನಗರದ ರೈಲ್ವೆ ನಿಲ್ದಾಣದ ಬಳಿ ಜುಲೈ 5ರಂದು ಮುಂಜಾನೆ 2:25ರ ಸುಮಾರಿಗೆ ಅಪರಿಚಿತ ಗ್ಯಾಂಗ್ ಒಂದು ಓಡಾಡಿದೆ. ನಾಲ್ವರ ಗ್ಯಾಂಗ್ ಚಡ್ಡಿ ಧರಿಸಿದ್ದು, ಮುಖಕ್ಕೆ ಬಟ್ಟೆ ಸುತ್ತಿಕೊಂಡು, ಸೊಂಟದಲ್ಲಿ ಮಾರಕಾಸ್ತ್ರಗಳನ್ನು ಕಟ್ಟಿಕೊಂಡು ದರೋಡೆಗೆ ಯತ್ನಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಗೌರಿಬಿದನೂರು ನಗರ ಪೊಲೀಸ್ ಸಿಬ್ಬಂದಿ ತಡರಾತ್ರಿ ಗಸ್ತಿನಲ್ಲಿದ್ದಾಗ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಸುಳಿವು ಸಿಕ್ಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡುವ ವೇಳೆಗೆ ಚಡ್ಡಿ ಗ್ಯಾಂಗ್ ಪರಾರಿಯಾಗಿತ್ತು. ಸಾರ್ವಜನಿಕರು ಎಚ್ಚರದಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಚಡ್ಡಿ ಹಾಕಿಕೊಂಡು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಈ ಗ್ಯಾಂಗ್ ಹಲವು ಕಡೆ ದರೋಡೆ ಮಾಡಿದೆ. ಚಡ್ಡಿ ಧರಿಸಿ ಆಯುಧ ಹಿಡಿದು ಎಲ್ಲದಕ್ಕೂ ರೆಡಿಯಾಗಿಯೇ ಫೀಲ್ಡ್‌ಗೆ ಇಳಿಯುವ ಈ ಖತರ್ನಾಕ್ ಕಳ್ಳರ ಗುಂಪು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಇದೆ. ಕಳೆದ ವರ್ಷ ಈ ಗ್ಯಾಂಗ್ ಸರ್ಜಾಪುರದ ಬಿಲ್ಲಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿತ್ತು. ಕೈಯಲ್ಲಿ ಆಯುಧಗಳನ್ನ ಹಿಡಿದು ಕಳ್ಳತನಕ್ಕಿಳಿದ ಗ್ಯಾಂಗ್ ನ ಐವರು ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್, ವಿಲ್ಲಾಗಳ ಬಳಿ ಚಡ್ಡಿ ಗ್ಯಾಂಗ್ ಓಡಾಟ ನಡೆಸಿತ್ತು.
ಈ ಸುದ್ದಿಯನ್ನೂ ಓದಿ: Robbery Case: ಬೆಂಗಳೂರಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ 2 ಕೋಟಿ ರೂ. ದರೋಡೆ
ಬಿಲ್ಲಾಪುರ ಗ್ರಾಮದ ಕಾನ್ಪಿಡೆಂಟ್ ಬೆಲ್ಲಟಿಕ್ಸ್ ಲೇಔಟ್ ನಲ್ಲಿರುವ ಚಿರಾಗ್ ಅಶೋಕ್ ಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಗ ಬೀಗ ಒಡೆದು ಮೂವತ್ತು ಸಾವಿರ ಹಣ ಕಳ್ಳತನ ಮಾಡಿದ್ದರು. ಬಿಲ್ಲಾಪುರ ಗ್ರಾಮದ ಇಂಡಸ್ ಇಂಟರ್ ನ್ಯಾಷನಲ್ ಸ್ಕೂಲಿಗೂ ಚಡ್ಡಿ ಗ್ಯಾಂಗ್ ಕನ್ನ ಹಾಕಿತ್ತು. ಈ ಗ್ಯಾಂಗ್ ಸದಸ್ಯರು ಮುಖಕ್ಕೆ ಮಾಸ್ಕ್ ಕರ್ಚಿಫ್ ಕಟ್ಟಿಕೊಂಡು ಇವರು ಕಳ್ಳತನಕ್ಕೆ ಇಳಿಯುತ್ತಾರೆ. ಕೈಯಲ್ಲಿ ಆಯುಧ ಹಿಡಿದುಕೊಂಡೇ ಇವರು ಬರುತ್ತಾರೆ. ಸದ್ಯ ಪೊಲೀಸ್ ಇಲಾಖೆ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.