ಚಂಡೀಗಢ, ಸೆ. 26: ಮದುವೆಯಾಗಲು ತಕ್ಷಣ ಅನುಮತಿ ನೀಡದಿದ್ದಕ್ಕೆ 18 ವರ್ಷದ ಪುತ್ರ ತನ್ನ ತಂದೆಯನ್ನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ. ಚಂಡೀಗಢ ಪೊಲೀಸ್ ಇಲಾಖೆಯ ಅಕೌಂಟ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ನಿತಿನ್ ಸಿಂಗ್ ಸೆಕ್ಟರ್ 22ರಲ್ಲಿರುವ ಸರ್ಕಾರಿ ನಿವಾಸದಲ್ಲಿ ಶುಕ್ರವಾರ ತಲೆಗೆ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಗೂ ಒಂದು ದಿನ ಮೊದಲು ನಿತಿನ್ ಸಿಂಗ್ ಮತ್ತು ಅವರ 18 ವರ್ಷದ ಪುತ್ರ ಅರ್ಮಾನ್ ನಡುವೆ ಮದುವೆ ವಿಚಾರವಾಗಿ ಜಗಳ ನಡೆದಿತ್ತು. ಘಟನಾ ಸ್ಥಳದಿಂದ ದೇಶೀ ನಿರ್ಮಿತ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅರ್ಮಾನ್ ತನ್ನ ಪ್ರೇಯಸಿಯನ್ನು ತಕ್ಷಣ ಮದುವೆಯಾಗಲು ಪೋಷಕರ ಮೇಲೆ ಒತ್ತಡ ಹೇರುತ್ತಿದ್ದ. ಆದರೆ ಭಾರತದಲ್ಲಿ ಪುರುಷರಿಗೆ ಕಾನೂನುಬದ್ಧ ಮದುವೆಯ ವಯಸ್ಸು 21 ವರ್ಷವಾಗಿರುವುದರಿಂದ, 21 ವರ್ಷ ತುಂಬಿದ ಬಳಿಕ ಮದುವೆಯಾಗುವಂತೆ ಪೋಷಕರು ಆತನಿಗೆ ತಿಳಿಸಿದ್ದರು.
“ಗುರುವಾರ (ಸೆಪ್ಟೆಂಬರ್ 24) ಸಂಜೆ ಅರ್ಮಾನ್ ತನ್ನ ಪೋಷಕರೊಂದಿಗೆ ವಾಗ್ವಾದ ನಡೆಸಿದ್ದ. ತಾನು ಪ್ರೀತಿಸುತ್ತಿರುವ ಯುವತಿಯನ್ನು ತಕ್ಷಣ ಮದುವೆಯಾಗಬೇಕು ಎಂದು ಆತ ಒತ್ತಾಯಿಸಿದ್ದ. ಆದರೆ 21 ವರ್ಷ ತುಂಬಿದ ಬಳಿಕ ಮದುವೆಯಾಗುವಂತೆ ಪೋಷಕರು ತಿಳಿಸಿದ್ದರು” ಎಂದು ಪೊಲೀಸ್ ಅಧಿಕಾರಿ ಸುಧೇಶ್ ಕುಮಾರ್ ಹೇಳಿದ್ದಾರೆ.
ಅಲ್ಲದೆ, ಆ ಯುವತಿಯನ್ನು ಮನೆಗೆ ಕರೆತರುವಂತೆ ಅರ್ಮಾನ್ ಒತ್ತಾಯಿಸಿದ್ದ. ವಿವಿಧ ಅಗತ್ಯಗಳಿಗಾಗಿ ಪೋಷಕರಿಂದ ಹಣವನ್ನೂ ಕೇಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಡಹಗಲೇ ವ್ಯಕ್ತಿಯ ಕತ್ತು ಕೊಯ್ದು ಕೊಲೆ: ಬಾಗೇಪಲ್ಲಿಯಲ್ಲಿ ಬೆಚ್ಚಿಬೀಳಿಸಿದ ಘಟನೆ
ತಾಯಿಯ ಮೇಲೂ ಹಲ್ಲೆಗೆ ಯತ್ನ
ತಂದೆಯ ಮೇಲೆ ಗುಂಡು ಹಾರಿಸಿದ ಬಳಿಕ ಅರ್ಮಾನ್ ತನ್ನ ತಾಯಿಯ ಕುತ್ತಿಗೆಯನ್ನು ಹಿಡಿದು ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಆಕೆ ತಪ್ಪಿಸಿಕೊಂಡು ಮನೆಯ ಮಹಡಿಗೆ ತೆರಳಿ ನೆರೆಹೊರೆಯವರನ್ನು ಎಚ್ಚರಿಸಿದ್ದಾರೆ.
ಘಟನೆ ಬಳಿಕ ಅರ್ಮಾನ್ ಮನೆಯಲ್ಲಿ ಹೊರಗಿನ ಯಾರೋ ಪ್ರವೇಶಿಸಿ ತನ್ನ ತಂದೆಯನ್ನು ಗುಂಡಿಕ್ಕಿದ್ದಾರೆ ಎಂಬಂತೆ ನಾಟಕ ಮಾಡಲು ಪ್ರಯತ್ನಿಸಿದ್ದ ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಕೃತ್ಯ ಎಸಗಿದ ಬಳಿಕವೂ ಅರ್ಮಾನ್ ಯಾವುದೇ ಪಶ್ಚಾತ್ತಾಪ ತೋರಿಸಲಿಲ್ಲ. ಪ್ರಕರಣದಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಅಪಘಾತ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಬಂದಿದ್ದ
ಅರ್ಮಾನ್ ಈ ಹಿಂದೆ ಅಪಘಾತ ಪ್ರಕರಣದಲ್ಲೂ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಮಣಿಮಾಜ್ರಾದಲ್ಲಿ ತನ್ನ ಸ್ನೇಹಿತನ ಮಹೀಂದ್ರಾ ಥಾರ್ ಕಾರ್ ಚಲಾಯಿಸುತ್ತಿದ್ದಾಗ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಅರ್ಮಾನ್‌ನನ್ನು ಬಂಧಿಸಲಾಗಿತ್ತು. ಬಳಿಕ ಆತ ಜಾಮೀನಿನ ಮೇಲೆ ಹೊರ ಬಂದಿದ್ದ.