ಮೆಕ್ಸಿಕೋ: ಒಂದು ವಾರದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಮೆಕ್ಸಿಕೋದ (Mexico) ಎರಡು ಜೈಲುಗಳಲ್ಲಿ ಗಲಭೆ (prisoners Clash) ಉಂಟಾಗಿದ್ದು, ಒಟ್ಟು 17 ಮಂದಿ ಸಾವನ್ನಪ್ಪಿದ್ದಾರೆ. ಸಿನಲೋವಾ (Sinaloa) ರಾಜ್ಯದ ಜೈಲಿನಲ್ಲಿ ಗುರುವಾರ ನಡೆದ ಗಲಭೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಇದಕ್ಕೂ ಮೊದಲು ತಮೌಲಿಪಾಸ್‌ನ (Tamaulipas) ರಾಜಧಾನಿ ಸಿವುದಾದ್ ವಿಕ್ಟೋರಿಯಾದ ಜೈಲಿನಲ್ಲಿ ಮಂಗಳವಾರ ರಾತ್ರಿ ನಡೆದ ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 7 ಮಂದಿ ಸಾವನ್ನಪ್ಪಿದ್ದರು.
ಸಿವುದಾದ್ ವಿಕ್ಟೋರಿಯಾದ ಜೈಲಿನಲ್ಲಿ ಗಲಭೆ ಉಂಟಾದ ಬಳಿಕ ಭಾರಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸಿನಲೋವಾ ರಾಜ್ಯದ ಜೈಲೊಂದರಲ್ಲಿ ಗುರುವಾರ ಗಲಭೆ ಉಂಟಾಗಿದೆ. ಇದರಿಂದ ಒಬ್ಬ ಸಂದರ್ಶಕ, ಒಂಬತ್ತು ಕೈದಿಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ 16 ಕೈದಿಗಳು ಗಾಯಗೊಂಡಿದ್ದು, ಅಧಿಕಾರಿಗಳು ಜೈಲನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಹಿಂಸಾಚಾರಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ರಾಜ್ಯದ ಭದ್ರತಾ ಕಚೇರಿ ತಿಳಿಸಿದೆ.
ಈ ಘಟನೆಗೂ ಮೊದಲು ಗಡಿ ರಾಜ್ಯವಾದ ತಮೌಲಿಪಾಸ್‌ನ ರಾಜಧಾನಿ ಸಿವುದಾದ್ ವಿಕ್ಟೋರಿಯಾದ ಜೈಲಿನಲ್ಲಿ ಮಂಗಳವಾರ ತಡರಾತ್ರಿ ಗುಂಡಿನ ದಾಳಿ ನಡೆದಿದೆ. ಬುಧವಾರ ಬೆಳಗಿನ ಜಾವದವರೆಗೂ ನಡೆದ ದಾಳಿ ಪ್ರತಿದಾಳಿಯ ಬಳಿಕ ಅಧಿಕಾರಿಗಳು ಜೈಲಿನ ಮೇಲೆ ಮತ್ತೆ ನಿಯಂತ್ರಣ ಸಾಧಿಸಿದರು.
ಈ ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು, ನಾಲ್ವರು ಕೈದಿಗಳು ಮೃತಪಟ್ಟಿದ್ದಾರೆ. ಆರು ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಏಳು ಕೈದಿಗಳು ಗಾಯಗೊಂಡಿದ್ದಾರೆ. ಜೈಲಿನಲ್ಲಿದ್ದ ಕೈದಿಗಳು ಬಂದೂಕುಗಳನ್ನು ಪಡೆದುಕೊಂಡು ಅಧಿಕಾರಿಗಳ ವಿರುದ್ಧ ದಾಳಿ ನಡೆಸಲು ಪ್ರಾರಂಭಿಸಿದ್ದರು ಎಂದು ತಿಳಿದುಬಂದಿರುವುದಾಗಿ ರಾಜ್ಯ ಭದ್ರತಾ ವಕ್ತಾರರ ಕಚೇರಿ ತಿಳಿಸಿದೆ.
ಈ ಘಟನೆಯ ಬಳಿಕ ಸಿವುದಾದ್ ವಿಕ್ಟೋರಿಯಾದ ಜೈಲಿಗೆ ತನಿಖೆಗಾಗಿ ನಿಯೋಗವನ್ನು ಮೆಕ್ಸಿಕೋದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಳುಹಿಸಿರುವುದಾಗಿ ಬುಧವಾರ ತಿಳಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 2016ರಲ್ಲಿ ನಡೆಸಿರುವ ತನಿಖೆಯ ಪ್ರಕಾರ ಸಿವುದಾದ್ ವಿಕ್ಟೋರಿಯಾ ಜೈಲಿನಲ್ಲಿ ಹೆಚ್ಚಿನ ಜನಸಂಖ್ಯೆ, ಅಸಮರ್ಪಕ ಮೇಲ್ವಿಚಾರಣೆ, ಸಿಬ್ಬಂದಿ ಕೊರತೆ, ಕಳಪೆ ಆರೋಗ್ಯ ಸೇವೆ, ಕೈದಿಗಳು ಆಡಳಿತ ನಡೆಸುವಂತಹ ಪರಿಸ್ಥಿತಿ ಇದೆ ಎಂದು ವರದಿಯಲ್ಲಿ ತಿಳಿಸಿತ್ತು.
ಅಹಮದಾಬಾದ್ ನಿಜಕ್ಕೂ ಮಹಿಳೆಯರಿಗೆ ಸುರಕ್ಷಿತವೇ? ಅಚ್ಚರಿಯ ಅನುಭವ ಬಿಚ್ಚಿಟ್ಟ ಕಂಟೆಂಟ್ ಕ್ರಿಯೇಟರ್!
ಈ ಜೈಲಿನಲ್ಲಿ ಪದೇ ಪದೇ ಗುಂಡಿನ ದಾಳಿ, ಬಂದೂಕುಗಳ ಕಳ್ಳಸಾಗಣೆ, ಗಲಭೆ ಮತ್ತು ಕೈದಿಗಳ ಪರಾರಿಯಂತಹ ಘಟನೆಗಳು ನಡೆದಿವೆ. ಕಳೆದ ಮಾರ್ಚ್‌ನಲ್ಲಿ ಇದೇ ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಸಂಘರ್ಷದಲ್ಲಿ ಮೂವರು ಮೃತಪಟ್ಟಿದ್ದರು. ಇದಕ್ಕೂ ಮೊದಲು ಜೈಲಿನ ಆವರಣದಲ್ಲಿ ಕೈದಿಗಳು ಸುರಂಗ ನಿರ್ಮಿಸಿ ಸಾಮೂಹಿಕವಾಗಿ ಪರಾರಿಯಾಗುವ ಪ್ರಯತ್ನ ನಡೆಸಿದ್ದರು.