ಉತ್ತರ ಪ್ರದೇಶದಲ್ಲೊಂದು ಬೆಚ್ಚಿ ಬೀಳಿಸುವ ಘಟನೆ; ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆ ಸಹಿಸಲಾಗದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸಹಪಾಠಿಗಳು
ಉತ್ತರ ಪ್ರದೇಶದ ಬರೇಲಿಯಲ್ಲಿ ಗುರುವಾರ (ಜನವರಿ 8) ಮಧ್ಯಾಹ್ನ ಹಿಂದೂ ಕಾಲೇಜ್ ಎದುರಿನಲ್ಲಿ ಭೀಕರ ಘಟನೆ ಸಂಭವಿಸಿದೆ. 19 ವರ್ಷದ ಬಿಕಾಂ ವಿದ್ಯಾರ್ಥಿ ಫರ್ಹಾದ್ ಅಲಿ ಅವರ ಮೇಲೆ ಸಹಪಾಠಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾರೆ. ಆರೋಪಿಗಳಾಗಿ ಅದೇ ಕಾಲೇಜಿನ ಬಿಎ 3ನೇ ಸೆಮಿಸ್ಟರ್ ವಿದ್ಯಾರ್ಥಿ ಆರುಷ್ ಸಿಂಗ್ (21) ಮತ್ತು ಅವನ ಸ್ನೇಹಿತ ದೀಪಕ್ ಕುಮಾರ್ (20) ಎಂದು ಗುರುತಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಲಖನೌ, ಜ. 13: ದ್ವೇಷ, ಅಸೂಯೆ ಎಂಬುವುದು ಎಂಥವರ ಕೈಯಲ್ಲಿ ಏನನ್ನಾದರೂ ಮಾಡಿಸುತ್ತದೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ಶೈಕ್ಷಣಿಕವಾಗಿ ಮುಂದಿದ್ದಾನೆ ಎಂಬ ಒಂದೇ ಕಾರಣಕ್ಕೆ ಅಸೂಯೆಗೊಂಡು ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭಯಾನಕ ಘಟನೆ ಉತ್ತರ ಪ್ರದೇಶದ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫರ್ಹಾದ್ ಅಲಿ ಎಂಬಾತನೇ ಸಂತ್ರಸ್ತ ವಿದ್ಯಾರ್ಥಿಯಾಗಿದ್ದು, ಈತ ಬಿಕಾಂ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ. ಘಟನೆ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಫರ್ಹಾದ್ ಅಲಿ ವಿದ್ಯಾಭ್ಯಾಸ, ಶಿಸ್ತು ಸೇರಿದಂತೆ ಎಲ್ಲ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮುಂದಿದ್ದು, ಕಾಲೇಜಿನಲ್ಲಿ ಎಲ್ಲ ಶಿಕ್ಷಕರು ಹಾಗೂ ಸಹ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರನಾಗಿದ್ದ. ಈ ವಿಚಾರದ ಆರೋಪಿ ವಿದ್ಯಾರ್ಥಿಗಳಿಗೆ ತೀವ್ರ ನೋವನ್ನುಂಟು ಮಾಡಿತ್ತು. ಫರ್ಹಾದ್ ಅಲಿಯ ಜನಪ್ರೀಯತೆ, ಯಶಸ್ಸಿನಿಂದ ನಾವು ಎಲ್ಲರಿಂದಲೂ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದೇವೆ, ಯಾರೂ ನಮ್ಮತ್ತ ನೋಡುತ್ತಲೂ ಇಲ್ಲ ಎಂದು ಆರೋಪಿ ವಿದ್ಯಾರ್ಥಿಗಳು ಭಾವಿಸಿದ್ದರು. ಹಾಗಾಗಿ ಫರ್ಹಾದ್ ಅಲಿಗೆ ಒಂದು ಪಾಠ ಕಲಿಸಬೇಕು, ಅಲ್ಲದೇ ಅದನ್ನೆಲ್ಲ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಬೇಕು ಎಂದು ಆ ವಿದ್ಯಾರ್ಥಿಗಳು ಪ್ಲಾನ್ ಮಾಡಿದ್ದಾರೆ.
AI ಹುಡುಗಿ ನಂಬಿ ಬೆತ್ತಲಾದ ಯುವಕ, 1.5 ಲಕ್ಷ ರೂ. ಮಂಗಮಾಯ
ಘಟನೆಯ ದಿನದಂದು ಫರ್ಹಾದ್ ಅಲಿ ಪರೀಕ್ಷೆ ಬರೆದು ಮನೆಗೆ ವಾಪಸ್ ಆಗುತ್ತಿದ್ದ. ಆಗ ಆರೋಪಿ ವಿದ್ಯಾರ್ಥಿಗಳು ಫರ್ಹಾದ್ ಅಲಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ದಾಳಿಯಲ್ಲಿ ಸಂತ್ರಸ್ತ ವಿದ್ಯಾರ್ಥಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳಿಯರು ಫರ್ಹಾದ್ ಅಲಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಂತ್ರಸ್ತ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಪೊಲೀಸರು ಆರೋಪಿ ವಿದ್ಯಾರ್ಥಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿಗಳು, "ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪರಾಧಕ್ಕೆ ಬಳಸಲಾದ ಪೆಟ್ರೋಲ್ ಬಾಟಲ್ ಹಾಗೂ ಲೈಟರ್ ಅನ್ನು ವಶಪಡಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳ ವಿರದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿಯೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ವಿದ್ಯಾರ್ಥಿಗಳಲ್ಲಿ ಒಬ್ಬನನ್ನು ಕಾಲೇಜಿನಿಂದ ಹೊರಹಾಕಿದೆ. ಇನ್ನೊಬ್ಬ ವಿದ್ಯಾರ್ಥಿಗೂ ಘಟನೆ ಬಗ್ಗೆ ವಿವರಣೆ ನೀಡುವಂತೆ ಹೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಕಾಲೇಜು ಆವರಣದಲ್ಲಿ ಅಶಿಸ್ತು, ಹಿಂಸಾಚಾರ ಮತ್ತು ಯಾವುದೇ ರೀತಿಯ ಅಪರಾಧ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಕಾಲೇಜು ಪ್ರೊಕ್ಟರಲ್ ಸಮಿತಿಯು ಖಡಕ್ ಎಚ್ಚರಿಕೆ ನೀಡಿದೆ. ಇನ್ನು ಘಟನೆಯ ಬಗ್ಗೆ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.