ತೆಲಂಗಾಣ: ಪ್ರೇಮ ವಿವಾಹದ ಬಳಿಕ ಮಗಳನ್ನು ಆಕೆಯ ಪೋಷಕರು ಗಂಡನ ಮನೆಯಿಂದ ಅಪಹರಿಸಿದ್ದಾರೆ(kidnapping Case). ಈ ವೇಳೆ ಆಕೆಯ ಅತ್ತೆ, ಮಾವನವರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆ ತೆಲಂಗಾಣದ ಮೇಡ್ಚಲ್-ಮಲ್ಕಜ್‌ಗಿರಿಯ ಕೀಸಾರದಲ್ಲಿ ನಡೆದಿದೆ. ಪ್ರವೀಣ್ ಮತ್ತು ಶ್ವೇತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಬಳಿಕ ಶ್ವೇತಾಳನ್ನು ಪ್ರವೀಣ್ ಮನೆಯಿಂದ ಆಕೆಯ ಕುಟುಂಬ ಅಪಹರಿಸಿದೆ ಎಂದು ಆರೋಪಿಸಲಾಗಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸ್ ತನಿಖೆಗೆ ಒತ್ತಾಯಿಸಲಾಗಿದೆ.
ತೆಲಂಗಾಣದ ಮೇಡ್ಚಲ್- ಮಲ್ಕಜ್‌ಗಿರಿ ಜಿಲ್ಲೆಯ ಕೀಸಾರದಲ್ಲಿ ನಡೆದ ಈ ಘಟನೆಯಲ್ಲಿ ಯುವತಿಯೊಬ್ಬಳು ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾಳೆ ಎಂದು ಆರೋಪಿಸಿರುವ ಆಕೆಯ ಪೋಷಕರು ಮದುವೆಯಾದ ನಾಲ್ಕು ತಿಂಗಳ ಅನಂತರ ಆಕೆಯನ್ನು ಗಂಡನ ಮನೆಯಿಂದ ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರವೀಣ್ ಮತ್ತು ಶ್ವೇತಾಳ ಮದುವೆಗೆ ಆಕೆಯ ಕುಟುಂಬದ ಆಕ್ಷೇಪಣೆ ಇತ್ತು. ಆದರೂ ಆಕೆ ಪ್ರವೀಣ್ ನನ್ನು ಮದುವೆಯಾಗಿದ್ದಾಳೆ. ಶ್ವೇತಾಳ ಸಂಬಂಧಿಕರು ಮಂಗಳವಾರ ಪ್ರವೀಣ್ ಮನೆಗೆ ನುಗ್ಗಿ ಕುಟುಂಬ ಸದಸ್ಯರ ಕಣ್ಣಿಗೆ ಮೆಣಸಿನ ಪುಡಿ ಎಸೆದು ಬಲವಂತವಾಗಿ ಶ್ವೇತಾಳನ್ನು ಎಳೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Crime News: ಅಮೆರಿಕದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನು ಕೊಂದ ಭಾರತೀಯ
ವರನಿಗೆ ಸರಿಯಾದ ಕೆಲಸ ಇಲ್ಲ ಎಂದು ಯುವತಿಯ ಪೋಷಕರು ಭಾವಿಸಿದ್ದಾರೆ. ಎರಡೂ ಕುಟುಂಬಗಳು ಒಂದೇ ಜಾತಿಗೆ ಸೇರಿದ್ದು, ಪರಸ್ಪರ ಸಂಬಂಧಿಗಳಾಗಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶ್ವೇತಾಳ ಕುಟುಂಬ ಸದಸ್ಯರು ಆಕೆಯನ್ನು ಮನೆಯಿಂದ ಹೊರಗೆಳೆದು ತಡೆಯಲು ಯತ್ನಿಸಿದ ಆಕೆಯ ಅತ್ತೆ- ಮಾವನ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೊದಲ್ಲಿ ಕಾಣಬಹುದು. ಪ್ರವೀಣ್ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.