ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅತ್ಯಾಚಾರ, ಗರ್ಭಪಾತ, ಭೂಮಿಗಾಗಿ ಕೊಲೆ: ಒಂದೊಂದೇ ಹೊರ ಬರುತ್ತಿದೆ ನಾಸಿಕ್‌ನ ಸ್ವಂಘೋಷಿತ ʼದೇವ ಮಾನವನʼ ಖರಾತ್‌ನ ಕರಾಳ ಮುಖ

ಮಹಾರಾಷ್ಟ್ರದ ನಾಸಿಕ್‌ನ ಸ್ವಯಂಘೋಷಿತ ದೇವ ಮಾನವ ಅಶೋಕ್ ಕುಮಾರ್ ಖರಾತ್ ವಿರುದ್ಧ ಅತ್ಯಾಚಾರ, ಬಲವಂತದ ಗರ್ಭಪಾತ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಭೂಮಿಗಾಗಿ ಕೊಲೆ ಮಾಡಿದ ಗಂಭೀರ ಆರೋಪಗಳು ಕೇಳಿಬಂದಿವೆ. ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳು ಪ್ರಕರಣಕ್ಕೆ ಸಾಕ್ಷಿ ಒದಗಿಸಿದ್ದು, ಎಸ್ಐಟಿ ತನಿಖೆ ಮುಂದುವರಿದಿದೆ.

ಅಶೋಕ್ ಕುಮಾರ್ ಖರಾತ್

ಮುಂಬೈ, ಮಾ. 23: ಮಹಾರಾಷ್ಟ್ರದ ನಾಸಿಕ್‌ನ ಸ್ವಯಂಘೋಷಿತ ದೇವ ಮಾನವ ಅಶೋಕ್ ಕುಮಾರ್ ಖರಾತ್ ವಿರುದ್ಧ ಆಧ್ಯಾತ್ಮದ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ಯಾಚಾರ ಎಸಗಿದ್ದಲ್ಲದೆ, ಬಲವಂತದ ಗರ್ಭಪಾತ ಮಾಡಿದ್ದಾನೆ. ಜತೆಗೆ ಭೂ ವಿವಾದಕ್ಕಾಗಿ ಕೊಲೆ ಮಾಡಿದ್ದಾನೆ ಎಂದು ತನಿಕೆ ವೇಳೆ ಗೊತ್ತಾಗಿದೆ. ಅಶೋಕ್ ಕುಮಾರ್ ಖರಾತ್ (Ashok Kumar Kharat) ಎಂಬ ಸ್ವಯಂಘೋಷಿತ ದೇವಮಾನವ ಎನಿಸಿಕೊಂಡು ರಾಕ್ಷಸೀ ಕೃತ್ಯ ಎಸಗಿದ್ದಾನೆ.

ರಹಸ್ಯ ಕ್ಯಾಮೆರಾದಲ್ಲಿ ಕೃತ್ಯ ಸೆರೆ

ಏಳು ತಿಂಗಳ ಗರ್ಭಿಣಿಯೊಬ್ಬರು ತನ್ನ ಮಗುವಿನ ರಕ್ಷಣೆಗಾಗಿ ಆಶೀರ್ವಾದ ಪಡೆಯಲು ಖರಾತ್‌ನ ಖಾಸಗಿ ಕೋಣೆಗೆ ತೆರಳಿದ್ದರು. ಈ ವೇಳೆ ಆಕೆಯನ್ನು ಒಂಟಿಯಾಗಿ ಕರೆದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಾಗಿತ್ತು. ಇದನ್ನು ಪತಿಗೆ ತಿಳಿಸಿದಾಗ, ಸತ್ಯಾಂಶ ತಿಳಿಯಲು ಆಕೆಯ ಪತಿ ದೇವಮಾನವನ ಕೋಣೆಯಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದರು. ಈ ಕ್ಯಾಮೆರಾದಲ್ಲಿ 100ಕ್ಕೂ ಹೆಚ್ಚು ಆಘಾತಕಾರಿ ವಿಡಿಯೊ ತುಣುಕುಗಳು ಪತ್ತೆಯಾಗಿದ್ದು, ದೇವಮಾನವನು ಮಹಿಳೆಯರಿಗೆ ಅಮಲು ಪದಾರ್ಥಗಳನ್ನು ನೀಡಿ ಅವರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಕಂಡುಬಂದಿದೆ.

ಅತ್ಯಾಚಾರ ಮತ್ತು ಗರ್ಭಪಾತದ ದೂರು

ಮತ್ತೊಬ್ಬ ಮಹಿಳೆ ನೀಡಿದ ದೂರಿನಲ್ಲಿ 2020ರಿಂದ 2026ರ ಅವಧಿಯಲ್ಲಿ ಖರಾತ್ ತನ್ನ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ʼದೈವಿಕ ಜ್ಞಾನʼದ ನೆಪದಲ್ಲಿ ಆಕೆಯನ್ನು ಮರುಳು ಮಾಡಿ, ನಂತರ ವಿಧಿವಿಧಾನಗಳ ಹೆಸರಿನಲ್ಲಿ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಈ ವೇಳೆ ಆಕೆ ಗರ್ಭಿಣಿಯಾದಾಗ, ಬಲವಂತವಾಗಿ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಲಾಗಿತ್ತು ಎಂದು ಮಹಿಳೆ ದೂರಿದ್ದಾರೆ. ಮಕ್ಕಳ ಪ್ರಾಣಕ್ಕೆ ಅಪಾಯವಿರುವುದಾಗಿ ಬೆದರಿಕೆ ಹಾಕಿದ್ದರಿಂದ ಇಷ್ಟು ದಿನ ಮೌನವಾಗಿದ್ದಾಗಿ ಅವರು ತಿಳಿಸಿದ್ದಾರೆ.

ಚಿನ್ನ ಅಕ್ರಮ ಸಾಗಣೆ ಪ್ರಕರಣ; ಉಗಾಂಡ ಏಜೆಂಟ್‌ನಿಂದ 2 ಕೋಟಿ ಕಳೆದುಕೊಂಡಿದ್ದ ರನ್ಯಾ ರಾವ್‌!

ಮೂಢನಂಬಿಕೆ ಮತ್ತು ವಂಚನೆ

ದೇವಮಾನವನು ಜನರನ್ನು ವಂಚಿಸಲು ಕೃತಕ ಹಾವುಗಳನ್ನು ಬಳಸಿ ಭಯ ಹುಟ್ಟಿಸುತ್ತಿದ್ದ ಮತ್ತು ಸಾಮಾನ್ಯ ಹುಣಸೆ ಬೀಜಗಳನ್ನು ಪಾಲಿಶ್ ಮಾಡಿ ಅವುಗಳನ್ನು ʼಶಕ್ತಿಯುತ ರತ್ನಗಳುʼ ಎಂದು ಹೇಳಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎಂಬ ವಿಷಯವೂ ಬೆಳಕಿಗೆ ಬಂದಿದೆ.

ಭೂ ವಿವಾದ ಮತ್ತು ಕೊಲೆಯ ಆರೋಪ

ಕೇವಲ ಲೈಂಗಿಕ ದೌರ್ಜನ್ಯ ಮಾತ್ರವಲ್ಲದೆ, ಭೂಮಿಯನ್ನು ಕಬಳಿಸಲು ಕೊಲೆ ಮಾಡಿದ ಆರೋಪವೂ ಖರಾತ್ ಮೇಲಿದೆ. ಜಾದವ್ ಎಂಬುವವರ ಕುಟುಂಬಕ್ಕೆ ಸೇರಿದ ಭೂಮಿಯನ್ನು ಪ್ರಭಾವ ಬಳಸಿ ಖರಾತ್ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದ ಎನ್ನಲಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಎರಡು ದಿನಗಳ ಮೊದಲು, ಕೈಲಾಶ್ ಜಾದವ್ ಎಂಬುವವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದು ಅಪಘಾತವಲ್ಲ, ಭೂಮಿಗಾಗಿ ಮಾಡಲಾದ ವ್ಯವಸ್ಥಿತ ಕೊಲೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.

ತನಿಖೆ ತೀವ್ರ

ಸದ್ಯ ವಿಶೇಷ ತನಿಖಾ ತಂಡ (SIT) ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಖರಾತ್‌ನನ್ನು ಬಂಧಿಸಲಾಗಿದೆ. ರಹಸ್ಯ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಸಂತ್ರಸ್ತರು ದೂರು ನೀಡಲು ಮುಂದೆ ಬರುವ ಸಾಧ್ಯತೆಯಿದೆ.