ತಿರುವನಂತಪುರಂ, ಮೇ 31: ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು; ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ ಈ ಮಾತನ್ನು ಈ ನೀಚ ತಾಯಿಯೊಬ್ಬಳು ಸುಳ್ಳಾಗಿಸಿದ್ದಾಳೆ. ಪ್ರಿಯಕರನ ಜತೆ ಸೇರಿ ತನ್ನ ಮಗುವನ್ನು ಕೊಂದೇಬಿಟ್ಟಿದ್ದಾಳೆ ಈ ಮಹಾತಾಯಿ. ತನ್ನ ಒಡಲಲ್ಲಿ ಹುಟ್ಟಿದ ಮಗುವನ್ನು ಕೊಲ್ಲುವ ಮನಸ್ಸಾದರೂ ಹೇಗೆ ಬಂತು ಎಂದು ಜನರು ಇದೀಗ ಶಪಿಸುತ್ತಿದ್ದಾರೆ. ಹೌದು, ಒಂದೂವರೆ ವರ್ಷದ ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಕೇರಳಂ ಪೊಲೀಸರು ಬಂಧಿಸಿದ್ದಾರೆ (Crime News).
ಮಹಿಳೆಯ ಮೊದಲ ಪತಿಯಿಂದ ಜನಿಸಿದ್ದ ಬಾಲಕ ಅರ್ಷಿದ್ ಮೇಲೆ ಮೇ 29ರಂದು ಕ್ರೌರ್ಯ ಎಸಗಿದ ಆರೋಪದ ಮೇಲೆ ಅಖಿಲಾ ಮತ್ತು ಆಕೆಯ ಸಂಗಾತಿ ಅಶ್ಕರ್‌ನನ್ನು ಬಂಧಿಸಲಾಗಿದೆ ಎಂದು ನೆಡುಮಂಗಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ದೇಹದ ಮೇಲೆ ಹಲವು ಗಾಯಗಳು ಕಂಡುಬಂದಿದ್ದು, ತಾಯಿ ಮತ್ತು ಆಕೆಯ ಸಂಗಾತಿ ಇಬ್ಬರನ್ನೂ ಬಂಧಿಸಲಾಗಿದೆ.
ಮೇ 29ರಂದು ಸಂಜೆ 4:30ರ ಸುಮಾರಿಗೆ ಆಹಾರ ಮತ್ತು ನೀರು ಸೇವಿಸಿ ಮಲಗಿದ ಅರ್ಷಿದ್ ಇದ್ದಕ್ಕಿದ್ದಂತೆ ಕೆಮ್ಮಲು ಪ್ರಾರಂಭಿಸಿದನು ಎಂದು ಅಶ್ಕರ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದ. ನಂತರ ಅವನು ಬಾಯಿ ಮತ್ತು ಮೂಗಿನ ಮೂಲಕ ವಾಂತಿ ಮಾಡಿಕೊಂಡನು. ಅವನು ಸೇವಿಸಿದ ಆಹಾರ ಮತ್ತು ನೀರು ಹೊರಬಂದವು. ನಂತರ, ಅವನು ಪ್ರಜ್ಞೆ ತಪ್ಪಿದ ಎಂದು ಹೇಳಿಕೆ ನೀಡಿದ್ದ.
ಒಂದೂವರೆ ವರ್ಷದ ಮಗುವನ್ನು ನೆಲಕ್ಕೆ ಕುಕ್ಕಿ ಕೊಂದವನಿಗೆ ನರಕ ತೋರಿಸಿದ ಪೊಲೀಸರು
ʼʼಮಗುವನ್ನು ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ದೆʼʼ ಎಂದು ಅಶ್ಕರ್ ಹೇಳಿದ್ದಾನೆ. ಅಲ್ಲಿಂದ ತಿರುವನಂತಪುರಂನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮಗು ಈಗಾಗಲೇ ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು. ಮಗುವಿನ ದೇಹದಲ್ಲಿ ಹಲವು ಗಾಯದ ಗುರುತುಗಳಿದ್ದವು ಎಂದು ತಿಳಿದುಬಂದಿದೆ.
ಮಗು ಸಾವಿಗೀಡಾಗಲು ಬಾಲಕನ ತಾಯಿ ಮತ್ತು ಆಕೆಯ ಸಂಗಾತಿ ಕಾರಣ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದರು. ಹುಟ್ಟುವ ಮೊದಲೇ ಮಗುವಿನ ತಂದೆ ಮೃತಪಟ್ಟಿದ್ದರು. “ನನ್ನ ಮಗಳು ಮಗುವನ್ನು ಮನೆಯಿಂದ ಕರೆದುಕೊಂಡು ಹೋದಾಗ ಅವನಿಗೆ ಯಾವುದೇ ಗಾಯಗಳಾಗಿರಲಿಲ್ಲ” ಎಂದು ಅಜ್ಜಿ ಕಣ್ಣೀರಿಟ್ಟಿದ್ದಾರೆ.
ಮಗುವಿನ ದೇಹದಾದ್ಯಂತ ವೃತ್ತಾಕಾರದ ಸುಟ್ಟ ಗುರುತುಗಳಿದ್ದು, ಅವು ಸಿಗರೇಟಿನಿಂದ ಉಂಟಾಗಿರುವಂತೆ ತೋರುತ್ತಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಮಗುವಿನ ದೇಹ ನೋಡುತ್ತಿದ್ದರೆ, ಇಂತಹ ಜಾಗದಲ್ಲಿ ಗಾಯಗಳಿಲ್ಲ ಎಂದು ಹೇಳುವಂತಿಲ್ಲ. ದೇಹ ತುಂಬಾ ಹಸಿ ಗಾಯಗಳಿವೆ ಎಂದು ಮಗುವಿನ ಅಜ್ಜ-ಅಜ್ಜಿಯರು ಕಣ್ಣೀರಿಟ್ಟಿದ್ದಾರೆ.