ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಸೈಬರ್ ಕ್ರೈಂಗೆ (Cyber Crime) ಒಳಗಾಗುತ್ತಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ವಿದ್ಯಾವಂತರು ಈ ರೀತಿಯ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. 2024 ರಲ್ಲಿ ಸೈಬರ್ ಅಪರಾಧಿಗಳು ಮತ್ತು ವಂಚಕರಿಂದ ದೇಶದಲ್ಲಿ ಜನರು 22,842 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ದೆಹಲಿ ಮೂಲದ ಮಾಧ್ಯಮ ಮತ್ತು ತಂತ್ರಜ್ಞಾನ ಕಂಪನಿಯಾದ ಡೇಟಾಲೀಡ್ಸ್ ಬೆಚ್ಚಿ ಬೀಳಿಸುವ ವರದಿಯೊಂದನ್ನು ಬಿಡುಗಡೆ ಮಾಡಿದೆ. ರಾಜ್ಯ ಮತ್ತು ಕೇಂದ್ರ ಕಾನೂನು ಜಾರಿ ಸಂಸ್ಥೆಗಳ ನಡುವೆ ಸಂಪರ್ಕ ಸಾಧಿಸುವ ಫೆಡರಲ್ ಸಂಸ್ಥೆಯಾದ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್, I4C, ಈ ವರ್ಷ ಭಾರತೀಯರು 1.2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವನ್ನು ಅನುಭವಿಸುತ್ತಾರೆ ಎಂದು ಭವಿಷ್ಯ ನುಡಿದಿದೆ.
ವರ್ಷದಿಂದ ವರ್ಷಕ್ಕೆ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. 2023 ಕ್ಕೆ ಹೋಲಿಸಿದರೆ, ಕಳೆದ ವರ್ಷದ 7,465 ಕೋಟಿ ರೂ.ಗಿಂತ ಸುಮಾರು ಮೂರು ಪಟ್ಟು ಹೆಚ್ಚು ಮತ್ತು 2022 ರಲ್ಲಿದ್ದ 2,306 ರೂ.ಗಿಂತ ಸುಮಾರು 10 ಪಟ್ಟು ಹೆಚ್ಚು ಎಂದು ವರದಿ ತಿಳಿಸಿದೆ. ಅದೇ ರೀತಿ ಸೈಬರ್ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ಗಮನಿಸಿದರೆ, 2024 ರಲ್ಲಿ ಸುಮಾರು ಇಪ್ಪತ್ತು ಲಕ್ಷ ವರದಿಯಾಗಿದೆ, ಇದು ಹಿಂದಿನ ವರ್ಷ ಸುಮಾರು 15.6 ಲಕ್ಷ ಮತ್ತು 2019 ರಲ್ಲಿ ದಾಖಲಾಗಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ.
ಡಿಜಿಟಲೀಕರಣದ ಬಳಿಕ ಹಣ ಕಳೆದು ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಈ ವರದಿ ಹೇಳಿದೆ. I4C ಡೇಟಾ ಪ್ರಕಾರ, ಜನವರಿ 2024 ರಲ್ಲಿ ವಾಟ್ಸಾಪ್‌ನಲ್ಲಿ ಮಾತ್ರ 15,000 ಕ್ಕೂ ಹೆಚ್ಚು ಹಣಕಾಸು ಸಂಬಂಧಿತ ಸೈಬರ್ ಅಪರಾಧ ದೂರುಗಳು ವರದಿಯಾಗಿವೆ. ಫೆಬ್ರವರಿಯಲ್ಲಿ ಸುಮಾರು 14,000 ಮತ್ತು ಮಾರ್ಚ್‌ನಲ್ಲಿ 15,000 ದೂರುಗಳು ವರದಿಯಾಗಿವೆ. ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ಕೂಡ ಆ ಪಟ್ಟಿಯಲ್ಲಿವೆ.
ಡಿಜಿಟಲ್ ಅರೆಸ್ಟ್ 2024 ರ ಬಹು ದೊಡ್ಡ ಸೈಬರ್ ಕ್ರೈಂ ಆಗಿದ್ದು, 22,842 ಕೋಟಿ ರೂ ಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು ಡಿಜಿಟಲ್ ಅರೆಸ್ಟ್ ಮೂಲಕ ಹಣ ಕಳೆದುಕೊಂಡಿದ್ದು ಎಂದು ತಿಳಿದು ಬಂದಿದೆ. ಇನ್ನೂ ಹೆಚ್ಚಿನವು ಷೇರು ಮಾರುಕಟ್ಟೆ ಮೋಸ, ಡೀಪ್‌ಸೀಕ್, ಹನಿ ಟ್ರಾಪ್ ಸೇರಿದಂತೆ ಹಲವು ಬಗೆಯಲ್ಲಿ ವಂಚಕರು ವಂಚನೆ ಮಾಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Digital Arrest : ಎರಡು ಗಂಟೆಗಳ ಡಿಜಿಟಲ್ ಅರೆಸ್ಟ್... ಮಾಜಿ ಮಿಸ್ ಇಂಡಿಯಾ ವಿಜೇತೆಗೆ 99 ಸಾವಿರ ರೂ. ಪಂಗನಾಮ!
ಸೈಬರ್ ಅಪರಾಧಗಳ ಕುರಿತು ಪೊಲೀಸ್ ಇಲಾಖೆ ಹಾಗೂ ಸರ್ಕಾರ ಸಾಕಷ್ಟು ಜಾಗೃತಿಯನ್ನು ಮೂಡಿಸಿದರೂ ಜನರು ಹಲವು ಆಮಿಷಗಳಿಗೆ ಒಳಗಾಗಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮೋಸಕ್ಕೊಳಗಾದವರು ಒಂದು ಗಂಟೆಯ ಒಳಗೆ ಹತ್ತಿರದ ಪೊಲೀಸರನ್ನು ಸಂಪರ್ಕಿಸಬೇಕು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.