Disha Patani: ಬಾಲಿವುಡ್‌ನ ಖ್ಯಾತ ನಟಿ ಮನೆ ಮೇಲೆ ಗುಂಡಿನ ದಾಳಿ; ಪಿಚ್ಚರ್ ಬಾಕಿ ಹೇ ಎಂದು ವಾರ್ನಿಂಗ್!
ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಗೋಲ್ಡಿ ಬ್ರಾರ್ ಗ್ಯಾಂಗ್ ಇದರ ಹೊಣೆಯನ್ನು ಹೊತ್ತುಕೊಂಡಿದ್ದು, ಇದು ಕೇವಲ ಟ್ರೈಲರ್ ಎಂದು ಹೇಳಿದೆ. ಧರ್ಮದ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಈ ದಾಳಿ ನಡೆಸಿರುವುದಾಗಿ ದಾಳಿಕೋರರು ಹೇಳಿದ್ದಾರೆ.

-

ಬರೇಲಿ: ನಟಿ ದಿಶಾ ಪಟಾನಿ (Actress Disha Patani) ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (bareilly) ನಡೆದಿದೆ. ಗೋಲ್ಡಿ ಬ್ರಾರ್ ಗ್ಯಾಂಗ್ (Goldy Brar Gang) ಇದರ ಹೊಣೆಯನ್ನು ಹೊತ್ತುಕೊಂಡಿದ್ದು, ಇದು ಕೇವಲ ಟ್ರೈಲರ್ ಎಂದು ಹೇಳಿದೆ. ದಿಶಾ ಪಟಾನಿ ಅವರ ಮನೆಯ ಹೊರಗೆ ಕೆಲವು ಅಪರಿಚಿತರು ಗುಂಡು ಹರಿಸಿದ್ದಾರೆ. ಈ ದಾಳಿಯ ಹೊಣೆಯನ್ನು ರೋಹಿತ್ ಗೋದಾರ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ನ ಸದಸ್ಯರು ಹೊತ್ತುಕೊಂಡಿದ್ದು, ಧರ್ಮದ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
ಈ ದಾಳಿಯ ಕುರಿತು ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿರುವ ಗ್ಯಾಂಗ್‌ನ ಸದಸ್ಯ ವೀರೇಂದ್ರ ಚರಣ್, ದೇವತೆಗಳು ಮತ್ತು ಸನಾತನ ಧರ್ಮದ ಅವಮಾನವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾನೆ.
ಈ ಗುಂಡಿನ ದಾಳಿ ಕೇವಲ ಟ್ರೇಲರ್ ಎಂದು ತಿಳಿಸಿರುವ ಅವರು, ಮುಂದಿನ ಬಾರಿ ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮದ ಬಗ್ಗೆ ಅಗೌರವ ತೋರಿಸಿದರೆ ನಾವು ಅವರನ್ನು ಅವರ ಮನೆಯಿಂದ ಜೀವಂತವಾಗಿ ಹೋಗಲು ಬಿಡುವುದಿಲ್ಲ ಎಂದು ತಿಳಿಸಿದ್ದು, ಪಟಾನಿ ಅವರು ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜ್ ಅವರನ್ನು ಅವಮಾನಿಸಿದ್ದಾರೆ ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ.
ಇದು ಎಲ್ಲಾ ಚಲನಚಿತ್ರ ಕಲಾವಿದರು ಮತ್ತು ದಿಶಾ ಪಟಾನಿ ಜೊತೆ ಸಂಬಂಧ ಹೊಂದಿರುವ ಎಲ್ಲರಿಗೂ ಒಂದು ಎಚ್ಚರಿಕೆ. ಭವಿಷ್ಯದಲ್ಲಿ ಯಾರಾದರೂ ನಮ್ಮ ಧರ್ಮ ಮತ್ತು ಸಂತರಿಗೆ ಸಂಬಂಧಿಸಿ ಅಗೌರವ ತೋರಿದರೆ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು. ನಮ್ಮ ಧರ್ಮವನ್ನು ರಕ್ಷಿಸಲು ನಾವು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿದ್ದೇವೆ. ನಮಗೆ, ಧರ್ಮ ಮತ್ತು ಇಡೀ ಸಮಾಜ ಯಾವಾಗಲೂ ಒಂದೇ. ಅವರನ್ನು ರಕ್ಷಿಸುವುದು ನಮ್ಮ ಮೊದಲ ಕರ್ತವ್ಯ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಈ ಕುರಿತು ದೂರು ನೀಡಿರುವ ನಟಿಯ ತಂದೆ ಜಗದೀಶ್ ಪಟಾನಿ, ದಾಳಿಕೋರರನ್ನು ಬಂಧಿಸಲು ಪೊಲೀಸರು ಐದು ತಂಡಗಳನ್ನು ರಚಿಸಿದ್ದಾರೆ.
ಮಾಹಿತಿಯ ಪ್ರಕಾರ, ನಟಿ ದಿಶಾ ಪಟಾನಿ ಬರೇಲಿಯ ಸಿವಿಲ್ ಲೈನ್ಸ್‌ನಲ್ಲಿ ಮನೆ ಹೊಂದಿದ್ದಾರೆ. ಬೆಳಗಿನ ಜಾವ 3:30 ರ ಸುಮಾರಿಗೆ, ನಟಿಯ ತಂದೆ ಜಗದೀಶ್ ಪಟಾನಿ ಮತ್ತು ಇತರರು ಮನೆಯಲ್ಲಿ ಮಲಗಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಲು ಪ್ರಾರಂಭಿಸಿದರು. ಗುಂಡುಗಳ ಶಬ್ದ ಕೇಳಿ ಕುಟುಂಬ ಎಚ್ಚರವಾಯಿತು. ನೆರೆಹೊರೆಯ ಜನರು ಸಹ ಎಚ್ಚರಗೊಂಡರು. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ಪಡೆದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಇಬ್ಬರು ಬೈಕ್ ಸವಾರರು ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಘಟನೆಯ ನಂತರ ಕುಟುಂಬದಲ್ಲಿ ಭಯದ ವಾತಾವರಣವಿದೆ.
ಇದನ್ನೂ ಓದಿ: Chikkaballapur News: ಅರ್ಥಪೂರ್ಣವಾಗಿ ವಿಶ್ವಕರ್ಮ ಜಯಂತಿಯ ಆಚರಿಸಲು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಕರೆ
ಕಳೆದ ಕೆಲವು ದಿನಗಳ ಹಿಂದೆ ಗುರುಗ್ರಾಮ್‌ನಲ್ಲಿರುವ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಅವರ ಮನೆಯ ಮೇಲೆ ಮೂವರು ಮುಸುಕುಧಾರಿಗಳು ದಾಳಿ ನಡೆಸಿದ್ದರು. ದಾಳಿಕೋರರಲ್ಲಿ ಒಬ್ಬರನ್ನು ಫರಿದಾಬಾದ್‌ನಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಂಧಿಸಲಾಗಿದೆ.