ನವದೆಹಲಿ, ಆ. 28: ದೆಹಲಿ (Delhi) ಪೊಲೀಸರ ವಿಶೇಷ ಘಟಕವು ಪಾಕಿಸ್ತಾನದ (Pakistan) ಐಎಸ್ಐ ಬೆಂಬಲಿತ ಬೇಹುಗಾರಿಕೆ ಜಾಲವನ್ನು ಭೇದಿಸಿದ್ದು, ಕಳೆದ ಎರಡು ವರ್ಷಗಳಿಂದ ಈ ಜಾಲಕ್ಕೆ ಕೈ ಜೋಡಿಸಿದ್ದ ದಂಪತಿಯನ್ನು ಬಂಧಿಸಿದೆ. ಬಂಧಿತರ ಬಳಿಯಿದ್ದ ಎರಡು ಮೊಬೈಲ್ ಫೋನ್‌ಗಳಲ್ಲಿ ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ನಡೆಸಿದ ಚಾಟ್‌ಗಳು ಪತ್ತೆಯಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ದಂಪತಿಯನ್ನು ಮೊಹಮ್ಮದ್ ಸಾಹಿಲ್ (25) ಮತ್ತು ಆತನ ಪತ್ನಿ ಸಮೀರಾ (21) ಎಂದು ಗುರುತಿಸಲಾಗಿದ್ದು, ಇವರು ಭಾರತೀಯ ಸಿಮ್ ಕಾರ್ಡ್‌ಗಳನ್ನು ಪಡೆದು, ಈ ಜಾಲದ ಬಳಕೆಗಾಗಿ ದುಬೈ ಮೂಲಕ ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ಈ ಸಿಮ್ ಕಾರ್ಡ್‌ಗಳನ್ನು ಬಳಸಿ ಪಾಕಿಸ್ತಾನದಿಂದಲೇ ವಾಟ್ಸ್‌ಆ್ಯಪ್ ಸಕ್ರಿಯಗೊಳಿಸಿ ನಿರ್ವಹಿಸುತ್ತಿದ್ದರು. ಅಲ್ಲದೆ, ಭಾರತದ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಸೂಕ್ಷ್ಮ ಮತ್ತು ವರ್ಗೀಕೃತ ಮಾಹಿತಿಗಳನ್ನು ಸಂಗ್ರಹಿಸಲು ಭಾರತದ ವಿವಿಧ ವಾಟ್ಸ್‌ಆ್ಯಪ್ ಗ್ರೂಪ್‌ಗಳ ಸದಸ್ಯರಾಗಲು ಈ ಕಾರ್ಡ್‌ಗಳನ್ನು ಬಳಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸೇನಾ ಕಂಟೋನ್ಮೆಂಟ್‌ಗಳ ರಹಸ್ಯ ಸರ್ವೇಕ್ಷಣೆ ನಡೆಸಲು ಭಾರತದಲ್ಲಿ ನೇಮಕಾತಿ ಮಾಡುವ ಮತ್ತು ಕೋರ್ಟ್-ಮಾರ್ಷಲ್ ಎದುರಿಸುತ್ತಿರುವ ಭಾರತೀಯ ಸೇನಾ ಸಿಬ್ಬಂದಿಯ ವಿವರಗಳನ್ನು ಹಂಚಿಕೊಳ್ಳುವ ಜವಾಬ್ದಾರಿಯನ್ನು ಈ ದಂಪತಿಗೆ ನೀಡಲಾಗಿತ್ತು ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ (ವಿಶೇಷ ಘಟಕ) ನರ್ರಾ ಚೈತನ್ಯ ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳು, ಓವರ್-ಗ್ರೌಂಡ್ ವರ್ಕರ್ಸ್ ಮತ್ತು ಲಾಜಿಸ್ಟಿಕಲ್ (ಸಾರಿಗೆ ಮತ್ತು ಸಾಮಗ್ರಿ) ಬೆಂಬಲವನ್ನು ನೀಡುವ ಸ್ಲೀಪರ್ ಸೆಲ್‌ಗಳ ಮೇಲೆ ನಿಗಾ ಇಡುವ ದೆಹಲಿ ಪೊಲೀಸರ ವಿಶೇಷ ಘಟಕಕ್ಕೆ, ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (NCR) ಐಎಸ್‌ಐ (ISI) ಬೆಂಬಲಿತ ಜಾಲವೊಂದು ಸಕ್ರಿಯವಾಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಲಭ್ಯವಿದ್ದ ಮಾಹಿತಿಯನ್ನು ಮತ್ತಷ್ಟು ಕಲೆಹಾಕಿದ ವಿಶೇಷ ಘಟಕವು, ದೆಹಲಿಯಲ್ಲಿ ಲಾಜಿಸ್ಟಿಕಲ್ (ಸಾಮಗ್ರಿ) ಬೆಂಬಲವನ್ನು ಪಡೆಯಲು ಮತ್ತು ಸಿಮ್ ಕಾರ್ಡ್‌ಗಳನ್ನು ಖರೀದಿಸಲು ಈ ಜಾಲವು ಕೆಲವು ವ್ಯಕ್ತಿಗಳನ್ನು ನೇಮಿಸಿಕೊಂಡಿರುವುದನ್ನು ಪತ್ತೆಹಚ್ಚಿದೆ. ಭಾರತದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಲು ಪಾಕಿಸ್ತಾನದಿಂದಲೇ ಈ ನಂಬರ್‌ಗಳ ಮೂಲಕ ವಾಟ್ಸ್‌ಆ್ಯಪ್ ಬಳಸಲಾಗುತ್ತಿರುವುದನ್ನು ತನಿಖಾ ತಂಡವು ಪತ್ತೆ ಹಚ್ಚಿದೆ.
ತನಿಖಾಧಿಕಾರಿಗಳು ಮಾಡ್ಯೂಲ್‌ನ ಸದಸ್ಯರನ್ನು ಗುರುತಿಸಿ ದಕ್ಷಿಣ ದೆಹಲಿಯ ಸರೈ ಕೇಲ್ ಖಾನ್ ನಿವಾಸಿ ಸಾಹಿಲ್‌ನನ್ನು ಬಂಧಿಸಿದ್ದಾರೆ. ಸಾಹಿಲ್ ತನ್ನ ಸ್ನೇಹಿತೆ ಸಮೀರಾ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಪಾಕಿಸ್ತಾನಿ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದ. ನಂತರ ಅವರಿಬ್ಬರೂ ಮದುವೆಯಾದರು. 2024 ಮತ್ತು 2025ರಲ್ಲಿ ದುಬೈ ಮೂಲಕ ಪಾಕಿಸ್ತಾನಕ್ಕೆ ಎಂಟು ಭಾರತೀಯ ಸಿಮ್ ಕಾರ್ಡ್‌ಗಳನ್ನು ಕಳುಹಿಸಿದ್ದಕ್ಕಾಗಿ ದಂಪತಿಗೆ 30,000 ರುಪಾಯಿ ಪಾವತಿಸಲಾಗಿದೆ.