ಕೋಲ್ಕತ್ತಾ, ನ.16: ಯುವತಿಯೊಬ್ಬಳು ಬ್ರೇಕ್ಅಪ್ ಮಾಡಿಕೊಂಡು ದೂರ ಉಳಿದಿದ್ದಕ್ಕೆ ಸಿಟ್ಟಿಗೆದ್ದ ಆಕೆಯ ಮಾಜಿ ಪ್ರೇಮಿ, ಆಕೆಯ ಪ್ರೀತಿಯ ಎರಡು ಸಾಕು ನಾಯಿಗಳನ್ನು ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ (Kolkata) ನಡೆದಿದೆ. ಅಷ್ಟೇ ಅಲ್ಲದೆ, ನಾಯಿಗಳನ್ನು ಕೊಲ್ಲುತ್ತಿರುವ ದೃಶ್ಯವನ್ನು ನೇರ ವೀಡಿಯೊ ಕಾಲ್ ಮೂಲಕ ಆ ಯುವತಿಗೆ ತೋರಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಮೂಲಗಳ ಪ್ರಕಾರ, ಆರೋಪಿಯು ಹಲವು ದಿನಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದು, ತನ್ನೊಂದಿಗೆ ಮತ್ತೆರಡು ವರ್ಷ ಒಡನಾಟ ಇಟ್ಟುಕೊಳ್ಳುವಂತೆ ಬೆದರಿಕೆ ಹಾಕುತ್ತಿದ್ದನು. ಯುವತಿ ಇದಕ್ಕೆ ಒಪ್ಪದ ಕಾರಣ, ಆಕೆಯ ಮನೆಯಲ್ಲಿದ್ದ ಮುದ್ದಿನ ನಾಯಿಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾನೆ.
ಡಿಜೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರ ಸಂಜೀವ್ ಭಟ್ಟಾಚಾರ್ಯ ಎಂಬಾತನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಮಹಿಳೆ ಕೆಲ ದಿನಗಳ ಹಿಂದೆ ಆರೋಪಿಯೊಂದಿಗೆ ಬ್ರೇಕ್ಅಪ್ ಮಾಡಿಕೊಂಡು ದೂರವಾಗಿದ್ದಳು. ಈ ವೇಳೆ ತನ್ನ ಎರಡು ಸಾಕುನಾಯಿಗಳನ್ನು ಅವನ ಮನೆಯಲ್ಲಿ ಬಿಟ್ಟು ಹೋಗಿದ್ದಳು. ಪ್ರೇಯಸಿ ದೂರವಾಗಿದ್ದಕ್ಕೆ ಕೋಪಗೊಂಡ ಆರೋಪಿ ಸಂಜೀವ್, ಆಕೆಯ ಎರಡು ನಾಯಿಗಳನ್ನು ವೀಡಿಯೊ ಕಾಲ್ ಮಾಡಿ ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಗಾಬರಿಗೊಂಡ ಮಹಿಳೆ ಸ್ಥಳೀಯರಿಗೆ ತನ್ನ ಮನೆಯನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾಳೆ.
ಪ್ರೀತಿ ನಿರಾಕರಿಸಿದ್ದಕ್ಕೆ ದ್ವೇಷ; ಶಾಲೆಯೊಳಗೆ ನುಗ್ಗಿ ಗರಗಸದಿಂದ ಬಾಲಕಿ ಮೇಲೆ ಹಲ್ಲೆ ಮಾಡಿದ ಯುವಕ
ನಾಯಿಯನ್ನು ನೇಣು ಹಾಕಿದ್ದ ಕ್ರೂರಿ
ಆರೋಪಿಯು ಒಂದು ನಾಯಿಯನ್ನು ನೇಣು ಹಾಕಿ ಕೊಂದು, ಮತ್ತೊಂದು ನಾಯಿಯನ್ನು ಇಟ್ಟಿಗೆಯಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನಟಿ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ದೆಬಲೀನಾ ದತ್ ಸೇರಿದಂತೆ ವಿವಿಧ ಪ್ರಾಣಿ ಕಲ್ಯಾಣ ಸಂಘಟನೆಗಳ ಸದಸ್ಯರು ಸ್ಥಳಕ್ಕೆ ಬಂದಿದ್ದಾರೆ.
ಆರೋಪಿ ಬಂಧನಕ್ಕೆ ಸ್ಥಳೀಯರಿಂದ ಆಕ್ರೋಶ
ನಾಯಿಗಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಈ ವೀಡಿಯೊ ಕಾಲ್ ದೃಶ್ಯ ಕಂಡು ಆಘಾತಕ್ಕೊಳಗಾದ ಯುವತಿ, ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಯುವತಿಯ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಕೋಲ್ಕತ್ತಾ ಪೊಲೀಸರು, ಕ್ರೂರ ಕೃತ್ಯ ಎಸಗಿದ ಪಾಪಿ ಮಾಜಿ ಪ್ರೇಮಿಯನ್ನು ಬಂಧಿಸಿದ್ದಾರೆ. ಪ್ರಾಣಿಗಳ ಮೇಲಿನ ಇಂತಹ ಅಮಾನುಷ ದೌರ್ಜನ್ಯ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಮಾನಸಿಕ ಹಿಂಸೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಹಾಗೂ ಪ್ರಾಣಿ ಪ್ರಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.