ಪ್ರೀತಿ ನಿರಾಕರಿಸಿದ್ದಕ್ಕೆ ದ್ವೇಷ; ಶಾಲೆಯೊಳಗೆ ನುಗ್ಗಿ ಗರಗಸದಿಂದ ಬಾಲಕಿ ಮೇಲೆ ಹಲ್ಲೆ ಮಾಡಿದ ಯುವಕ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಯುವಕನೊಬ್ಬ ಮರ ಕತ್ತರಿಸುವ ಚೈನ್ ಗರಗಸದಿಂದ ಭೀಕರವಾಗಿ ಹಲ್ಲೆ ನಡೆಸಿದ್ದು ಇಬ್ಬರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಾಲೆಯೊಳಗೆ ನುಗ್ಗಿ ಗರಗಸದಿಂದ ಬಾಲಕಿ ಮೇಲೆ ಹಲ್ಲೆ ಮಾಡಿದ ಯುವಕ -
ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ಅನಂತಪುರ ಜಿಲ್ಲೆಯ ರಾಪ್ತಾಡು ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಯುವಕನೊಬ್ಬ ಮರ ಕತ್ತರಿಸುವ ಚೈನ್ ಗರಗಸದಿಂದ (Chainsaw) ಭೀಕರವಾಗಿ ಹಲ್ಲೆ ನಡೆಸಿದ್ದು ಇಬ್ಬರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧರ್ಮವರಂ ಮೂಲದ ಹೇಮಂತ್ ಎಂಬ 21 ವರ್ಷದ ಯುವಕ ಶಾಲೆಯ ತರಗತಿ ಕೋಣೆಗೆ ಚೈನ್ ಗರಗಸದೊಂದಿಗೆ ನುಗ್ಗಿದ್ದಾನೆ. ಶಾಲೆಯಲ್ಲಿ ರಿಪೇರಿ ಕೆಲಸ ನಡೆಯುತ್ತಿದ್ದರಿಂದ ಆತ ಕಾರ್ಮಿಕನಿರಬಹುದು ಎಂದು ಭಾವಿಸಿ ಭದ್ರತಾ ಸಿಬ್ಬಂದಿ ಒಳಗೆ ಬಿಟ್ಟಿದ್ದರು ಎನ್ನಲಾಗಿದೆ.
ತರಗತಿಯೊಳಗೆ ನುಗ್ಗಿದ ಆತ ವಿದ್ಯಾರ್ಥಿನಿಯ ಮುಖ, ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಗರಗಸದಿಂದ ಹಲ್ಲೆ ಮಾಡಿದ್ದಾನೆ. 15 ವರ್ಷದ ಮುಖ್ಯ ವಿದ್ಯಾರ್ಥಿನಿಯ ಕುತ್ತಿಗೆ ಹಾಗೂ ಹೊಟ್ಟೆಗೆ ಆಳವಾದ ಗಾಯಗಳಾಗಿದ್ದು, ಆಕೆಯ ಬಲಗೈ ತುಂಡಾಗುವ ಸ್ಥಿತಿಯಲ್ಲಿದೆ. ಆಕೆಯನ್ನು ರಕ್ಷಿಸಲು ಮುಂದಾದ ಸಹಪಾಠಿ ವಿದ್ಯಾರ್ಥಿನಿಗೂ ಗಾಯಗಳಾಗಿವೆ. ಇಬ್ಬರನ್ನೂ ತಕ್ಷಣವೇ ಅನಂತಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಹೇಮಂತ್ ಗಾಯಗೊಂಡ ಬಾಲಕಿಯ ದೂರದ ಸಂಬಂಧಿಯಾಗಿದ್ದು, ಈ ಹಿಂದೆ ಆಕೆಗೆ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿಯೇ ಆತ ಈ ಕ್ರೂರ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಬಾಲಕಿಯರಿಗೆ ಉನ್ನತ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ. ಗೃಹ ಸಚಿವೆ ವಂಗಲಪುಡಿ ಅನಿತಾ ಹಾಗೂ ಶಿಕ್ಷಣ ಸಚಿವ ನಾರಾ ಲೋಕೇಶ್ ಅವರು ತಪ್ಪಿತಸ್ಥನಿಗೆ ಕಠಿಣ ಕಾನೂನು ಶಿಕ್ಷೆ ಖಾತರಿಪಡಿಸುವುದಾಗಿ ತಿಳಿಸಿದ್ದಾರೆ.
ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿ ಹೇಮಂತ್‌ನನ್ನು ಪೊಲೀಸರು ಧರ್ಮವರಂ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದು, ಆರೋಪಿಯ ವಿರುದ್ಧ ಕೊಲೆ ಯತ್ನ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ. ಸದ್ಯ ಆತನ ವಿಚಾರಣೆ ನಡೆಯುತ್ತಿದೆ.