ಭೋಪಾಲ್: ತ್ವಿಶಾ ಶರ್ಮಾ (Twisha Sharma) ಸಾವಿನ ಪ್ರಕರಣದಲ್ಲಿ ಆಕೆಯ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲ ಸಿಂಗ್ ಅವರನ್ನು ಸಿಬಿಐ ಗುರುವಾರ ಬಂಧಿಸಿದೆ. ಬುಧವಾರ ತಡರಾತ್ರಿ ಮಧ್ಯಪ್ರದೇಶ ಹೈಕೋರ್ಟ್ ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿಬಾಲಾ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿತ್ತು. ಸಿಬಿಐ ಅಧಿಕಾರಿಗಳು ಗುರುವಾರ ಬೆಳಗ್ಗೆ ನಿ. ನ್ಯಾ| ಗಿರಿಬಾಲಾ ಸಿಂಗ್ ಅವರ ನಿವಾಸಕ್ಕೆ ಹೋಗಿ ಕೆಲ ಗಂಟೆಗಳ ಕಾಲ ವಿಚಾರಣೆ ನಡೆಸಿ ಆ ನಂತರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೇ 15 ರಂದು ಭೋಪಾಲ್‌ನ ಸೆಷನ್ಸ್ ನ್ಯಾಯಾಲಯವು ಗಿರಿಬಾಲಾ ಸಿಂಗ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ದೇವನಾರಾಯಣ್ ಮಿಶ್ರಾ ಅವರ ಪೀಠವು ಜಾಮೀನನ್ನು ರದ್ದುಪಡಿಸಿತ್ತು. ತ್ವಿಶಾ ಗರ್ಭಿಣಿಯಾಗಿದ್ದರು ಮತ್ತು ಎರಡು ತಿಂಗಳ ಒಳಗಾಗಿ ಗರ್ಭಪಾತವಾಗಿತ್ತು. ಮಗುವಿನ ಬಗ್ಗೆ ಪತಿ ಅನುಮಾನ ವ್ಯಕ್ತಪಡಿಸುತ್ತಿದ್ದ ಉಲ್ಲೇಖಗಳು ಹಾಗೂ ಗರ್ಭಪಾತ ಮಾಡಿಸಿಕೊಳ್ಳುವಂತೆ ಪತಿ ಮತ್ತು ಅತ್ತೆ ಇಬ್ಬರೂ ಮಾನಸಿಕ ಕಿರುಕುಳ ನೀಡುತ್ತಿದ್ದರೆಂಬ ಆಪಾದನೆಗಳಿಗೆ ಪೂರಕವಾದ ವಾಟ್ಸಾಪ್ ಚಾಟ್‌ಗಳನ್ನು ಕೆಳ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಹೈಕೋರ್ಟ್ ಆಕ್ಷೇಪಿಸಿತ್ತು. ಇದೀಗ ಸಿಬಿಐ ನಿವೃತ್ತ ನ್ಯಾಯಾಧೀಶೆಯನ್ನು ಬಂಧಿಸಿದೆ.
ಏನಿದು ಪ್ರಕರಣ?
ಮಾಜಿ ‘ಮಿಸ್ ಪುಣೆ’ ಮತ್ತು ಎಂಬಿಎ ಪದವೀಧರೆಯಾಗಿದ್ದ ತ್ವಿಶಾ ಶರ್ಮಾ (ಮೂಲತಃ ನೋಯ್ಡಾ ಉದ್ಯಮಿಗಳ ಮಗಳು), ಡಿಸೆಂಬರ್ 2025 ರಲ್ಲಿ ವಕೀಲ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೇವಲ ಐದೇ ತಿಂಗಳಲ್ಲಿ, ಅಂದರೆ 2026ರ ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಪತಿಯ ಮನೆಯಲ್ಲಿ ತ್ವಿಶಾ ಶವವಾಗಿ ಪತ್ತೆಯಾಗಿದ್ದರು. ಮದುವೆಯಾದ ನಂತರವೂ ಪತಿ ಮತ್ತು ಅತ್ತೆ ನಿರಂತರವಾಗಿ ವರದಕ್ಷಿಣೆಗಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಮತ್ತು ವೈಯಕ್ತಿಕ ಖರ್ಚಿಗೂ ಹಣ ನೀಡದೆ ಸತಾಯಿಸುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ತ್ವಿಶಾ ಶರ್ಮಾ ಸಾವು ಪ್ರಕರಣ: ಅತ್ತೆಯ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಮಧ್ಯ ಪ್ರದೇಶ ಹೈಕೋರ್ಟ್
ಸ್ಥಳೀಯ ಪೊಲೀಸರ ತನಿಖೆಯಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದಂತೆ ಈ ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.