ಲಖನೌ, ಫೆ. 17: ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಯೋಧರೊಬ್ಬರು ಪತ್ನಿ ಮತ್ತು 16 ವರ್ಷದ ಮಗನನ್ನು ತಮ್ಮ ಮನೆಯಲ್ಲಿ ಗುಂಡಿಕ್ಕಿ ಕೊಂದು, ನಂತರ ಹತ್ತಿರದ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಸೋಮವಾರ (ಫೆಬ್ರವರಿ 16) ಬೆಳಗ್ಗೆ ಕಥೋಗರ್-ಇಮ್ಲಿಪುರ್ ಅಂಡರ್‌ಪಾಸ್ ಬಳಿಯ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ಬಂದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ (Crime News).
ಗೂಡ್ಸ್ ರೈಲು ಹರಿದು ಆ ವ್ಯಕ್ತಿ ಮೃತಪಟ್ಟಿದ್ದರು. ಮೃತದೇಹ ಜೇಬಿನಲ್ಲಿ ಕಂಡುಬಂದ ಆಧಾರ್ ಕಾರ್ಡ್ ಮೂಲಕ ಅವರನ್ನು 51 ವರ್ಷದ ನಿವೃತ್ತ ಸೇನಾ ಸಿಬ್ಬಂದಿ ಛೇತ್ರಮ್ ಪಾಸ್ವಾನ್ ಎಂದು ಗುರುತಿಸಲಾಗಿದೆ. ಸಮೀಪದಲ್ಲಿ ಬೈಕ್ ನಿಲ್ಲಿಸಲಾಗಿತ್ತು. ಇದು ಪೊಲೀಸರಿಗೆ ಅವರ ನಿವಾಸವನ್ನು ಪತ್ತೆಹಚ್ಚಲು ಸಹಾಯ ಮಾಡಿತು.
ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲು ಅಧಿಕಾರಿಗಳು ತುಳಸಿಯಾಪುರದ ನಯಿ ಬಸ್ತಿ ಪ್ರದೇಶದಲ್ಲಿರುವ ಅವರ ಮನೆಗೆ ತಲುಪಿದಾಗ, ಮನೆಯೊಳಗೆ ಅವರ ಪತ್ನಿ ಸುನೀತಾ ವರ್ಮಾ (40) ಮತ್ತು ಅವರ ಮಗ ದೀಪ್ (16) ಅವರ ಮೃತದೇಹಗಳು ಪತ್ತೆಯಾಗಿವೆ. ಸುನೀತಾ ಅವರ ತಲೆಗೆ ಮತ್ತು ದೀಪ್ ಎದೆಗೆ ಗುಂಡೇಟು ಬಿದ್ದಿದೆ. ಮಲಗುವ ಕೋಣೆಯಲ್ಲಿ ಎರಡೂ ಮೃತದೇಹಗಳು ಕಂಡು ಬಂದಿವೆ.
ಬೆಂಗಳೂರಿನಲ್ಲಿ ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಪುತ್ರರು
ಅಡುಗೆಮನೆಯಿಂದ ಮಲಗುವ ಕೋಣೆಯ ತನಕ ರಕ್ತದ ಕಲೆಗಳು ಗೋಚರಿಸಿದವು. ಸ್ಥಳದಿಂದ ಪರವಾನಗಿ ಪಡೆದ ಡಬಲ್ ಬ್ಯಾರೆಲ್ (ಡಿಬಿಬಿಎಲ್) ಗನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ವಿಪಿನ್ ಟಾಡಾ ಹೇಳಿದ್ದಾರೆ. ಭಾನುವಾರ ತಡರಾತ್ರಿ ಮನೆಯಲ್ಲಿ ಜಗಳ ನಡೆದಿರಬಹುದು ಎಂದು ಶಂಕಿಸಲಾಗಿದೆ. ನಂತರ ಪಾಸ್ವಾನ್ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿರಬಹುದು ಎನ್ನಲಾಗಿದೆ.
ಗುಂಡಿನ ಸದ್ದು ಕೇಳಿದ ಕೂಡಲೇ ಮಗ ಒಳಗೆ ಧಾವಿಸಿ ಬಂದಾಗ ಆತನಿಗೂ ಗುಂಡೇಟು ಬಿದ್ದಿರಬಹುದು ಎಂದು ಹೇಳಲಾಗಿದೆ. ನಂತರ ಪಾಸ್ವಾನ್ ಮನೆಯಿಂದ ಹೊರಬಂದು ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ, ನಂತರ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕವಾಗಿ ಈ ಪ್ರಕರಣ ಕೊಲೆ-ಆತ್ಮಹತ್ಯೆಯಂತೆ ಕಂಡುಬರುತ್ತಿದೆ. ಆದರೆ ವಿವರವಾದ ತನಿಖೆಯ ನಂತರವೇ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ ಎಂದು ಎಸಿಪಿ ಹೇಳಿದ್ದಾರೆ.
ವಿಧಿವಿಜ್ಞಾನ ತಂಡಗಳು ಘಟನಾ ಸ್ಥಳದಿಂದ ರಕ್ತದ ಮಾದರಿಗಳು, ಆಯುಧ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಕುಟುಂಬ ಮತ್ತು ಆರ್ಥಿಕ ಸಮಸ್ಯೆಗಳು ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಟಾಡಾ ಹೇಳಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ಯುವಕನ ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ
ಘಟಂಪುರದ ಸೆರುವಾ ಬಖಾರಿಯಾ ಗ್ರಾಮದ ನಿವಾಸಿ ಪಾಸ್ವಾನ್, ಭಾರತೀಯ ಸೇನೆಯಿಂದ ನಿವೃತ್ತರಾಗಿದ್ದರು. ಅವರು ಪ್ರಸ್ತುತ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕುಟುಂಬವು ಸುಮಾರು ಮೂರು ತಿಂಗಳ ಹಿಂದೆ ಹೊಸದಾಗಿ ನಿರ್ಮಿಸಲಾದ ಮನೆಗೆ ಸ್ಥಳಾಂತರಗೊಂಡಿತ್ತು.
ಪೊಲೀಸ್ ಮೂಲಗಳು ತಿಳಿಸುವಂತೆ ಪಾಸ್ವಾನ್ ಈ ಹಿಂದೆ ತಮ್ಮ ಮಗಳ ಮದುವೆ ಮತ್ತು ಮನೆ ನಿರ್ಮಾಣಕ್ಕಾಗಿ ಸುಮಾರು 12 ಲಕ್ಷ ರುಪಾಯಿ ಸಾಲ ಪಡೆದಿದ್ದರು. ಅಲ್ಪ ಕೃಷಿ ಭೂಮಿಯನ್ನು ಮಾರಿ ಸಾಲ ತೀರಿಸಲಾಗಿದೆ ಎನ್ನಲಾಗದಿದೆ. ಅವರ ಪುತ್ರಿಯ ವಿವಾಹ ಆರು ತಿಂಗಳ ಹಿಂದಷ್ಟೇ ನಡೆದಿತ್ತು.
ಭಾನುವಾರ ತಡರಾತ್ರಿ ದಂಪತಿ ಜಗಳವಾಡಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಈ ಮಧ್ಯೆ, ಪಾಸ್ವಾನ್ ಇಂತಹ ಕೃತ್ಯ ಎಸಗಲು ಸಾಧ್ಯವಿಲ್ಲ ಎಂದು ಅವರ ಸಹೋದರ ಹೇಳಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದರು. ವಿಧಿವಿಜ್ಞಾನ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.