Fake invoice racket: ಬೆಂಗಳೂರಿನಲ್ಲಿ 1,464 ಕೋಟಿ ಮೊತ್ತದ ನಕಲಿ ಇನ್‌ವಾಯ್ಸ್ ಸೃಷ್ಟಿ; ನಾಲ್ವರು ಅರೆಸ್ಟ್
ಸಿಮೆಂಟ್, ಕಬ್ಬಿಣ ಮತ್ತು ಉಕ್ಕು ಸೇರಿ ಕಟ್ಟಡ ಸಾಮಗ್ರಿ ಹೆಸರಿನಲ್ಲಿ ವ್ಯವಹಾರ ನಡೆಸಿದಂತೆ ತೋರಿಸಿ, ಯಾವುದೇ ವಸ್ತು ಸಾಗಣೆ ಇಲ್ಲದೇ ಭಾರೀ ಪ್ರಮಾಣದ ನಕಲಿ ವ್ಯವಹಾರ ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯದ ಜಾರಿ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ನಕಲಿ ಬಿಲ್‌ಗಳ ಸೃಷ್ಟಿಸಿ ತೆರಿಗೆ ವಂಚಿಸುತ್ತಿದ್ದ ಅಂತಾರಾಜ್ಯ ಜಾಲವನ್ನು ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯದ ಜಾರಿ ವಿಭಾಗದ ಅಧಿಕಾರಿಗಳು ಭೇದಿಸಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ನಕಲಿ ಬಿಲ್ ಜಾಲ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಬರೋಬ್ಬರಿ 1,464 ಕೋಟಿ ಮೊತ್ತದ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿ (Fake invoice racket), ಸುಮಾರು 355 ಕೋಟಿ ಮೊತ್ತದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು, ವಂಚನೆ ಎಸಗಿದ್ದಾರೆ.
ಸಿಮೆಂಟ್, ಕಬ್ಬಿಣ ಮತ್ತು ಉಕ್ಕು ಸೇರಿ ಕಟ್ಟಡ ಸಾಮಗ್ರಿ ಹೆಸರಿನಲ್ಲಿ ವ್ಯವಹಾರ ನಡೆಸಿದಂತೆ ತೋರಿಸಿ, ಯಾವುದೇ ವಸ್ತು ಸಾಗಣೆ ಇಲ್ಲದೇ ಭಾರೀ ಪ್ರಮಾಣದ ನಕಲಿ ವ್ಯವಹಾರಗಳನ್ನು ನಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ನಕಲಿ ಬಿಲ್‌ಗಳ ಮೂಲಕ ಸುಮಾರು 355 ಕೋಟಿ ಮೊತ್ತದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಅಕ್ರಮವಾಗಿ ಪಡೆದು, ವಿವಿಧ ಶೆಲ್ ಕಂಪನಿಗಳ ಮೂಲಕ ವರ್ಗಾಯಿಸಲಾಗಿದೆ.
ಬೆಂಗಳೂರು, ಚೆನ್ನೈ ಸೇರಿ ವಿವಿಧೆಡೆ ಏಕಕಾಲದಲ್ಲಿ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ 24 ಮೊಬೈಲ್ ಫೋನ್, 51 ಸಿಮ್ ಕಾರ್ಡ್, ವಿವಿಧ ಸಂಸ್ಥೆಗಳ ರಬ್ಬರ್ ಸ್ಟ್ಯಾಂಪ್‌ಗಳು ಮತ್ತು ಬಹು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಸ್ತಿತ್ವದಲ್ಲಿಲ್ಲದ ಕಂಪನಿಗಳಿಂದ ವಹಿವಾಟು
ಬೆಂಗಳೂರಿನಲ್ಲಿ ಕಚೇರಿ ಹೊಂದಿದ್ದ ರೇವತಿ ಮತ್ತು ಇ.ಪ್ರತಾಪ್ ಎಂಬುವರು ಹಲವು ಷೆಲ್ ಕಂಪನಿಗಳನ್ನು ಸ್ಥಾಪಿಸಿರುವುದನ್ನು ಪತ್ತೆ ಮಾಡಲಾಗಿತ್ತು. ಆದರೆ, ಅವು ಅಸ್ತಿತ್ವದಲ್ಲಿಲ್ಲದ ಕಂಪನಿಗಳು ಆಗಿದ್ದವು. ಈ ಇಬ್ಬರೂ ಪವರ್ ಸ್ಟೀಲ್ಸ್ ಆ್ಯಂಡ್ ಸಿಮೆಂಟ್ಸ್, ಪಿ.ಆರ್.ಕನ್‌ಸ್ಟ್ರಕ್ಷನ್ಸ್, ಎಸ್.ವಿ.ಟ್ರೇಡರ್ಸ್, ಎಸ್‌ಆರ್‌ಎಸ್ ಸ್ಟೀಲ್ ಟ್ರೇಡರ್ಸ್ ಎಂಬ ಷೆಲ್ ಕಂಪನಿಗಳನ್ನು ನಡೆಸುತ್ತಿದ್ದರು. ಈ ಕಂಪನಿಗಳ ಮಧ್ಯೆಯೇ ಕಬ್ಬಿಣ, ಸಿಮೆಂಟ್ ಪೂರೈಕೆ ವಹಿವಾಟು ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಜತೆಗೆ ಕೆಲವು ಬಿಲ್ಡರ್‌ಗಳಿಗೆ ಸಾಮಗ್ರಿ ಪೂರೈಸಿದಂತೆ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸುತ್ತಿದ್ದರು ಎನ್ನಲಾಗಿದೆ.
ಆ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಆರೋಪಿಗಳು ವಾಣಿಜ್ಯ ತೆರಿಗೆ ಇಲಾಖೆಯಿಂದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದುಕೊಳ್ಳುತ್ತಿದ್ದರು. ಕೆಲ ರಿಯಲ್ ಎಸ್ಟೇಟ್ ಕಂಪನಿಗಳು, ಬಿಲ್ಡರ್‌ಗಳಿಗೆ ಐಟಿಸಿಯನ್ನು ವರ್ಗಾಯಿಸಿ ಕಮಿಷನ್ ಕೂಡ ಪಡೆದುಕೊಂಡಿದ್ದರು.
ಇನ್ನು ಈ ಇಬ್ಬರ ಜತೆಗೆ ವಂಚನೆಯಲ್ಲಿ ತಮಿಳುನಾಡಿನ ಸೋದರರ ಜೋಡಿ ಭಾಗಿಯಾಗಿತ್ತು. ಟ್ರಯಾನ್ ಟ್ರೇಡರ್ಸ್, ವಂಡರ್ ಟ್ರೇಡರ್ಸ್, ರಾಯಲ್ ಟ್ರೇಡರ್ಸ್ ಮತ್ತು ಗ್ಯಾಲಕ್ಸಿ ಎಂಟರ್‌ಪ್ರೈಸಸ್ ಎಂಬ ಷೆಲ್ ಕಂಪನಿಗಳನ್ನು ನಡೆಸುತ್ತಿದ್ದ ಇರ್ಬಾಜ್ ಅಹಮದ್ ಮತ್ತು ನಫೀಜ್ ಅಹಮದ್ ಅವರು ರೇವತಿ ಹಾಗೂ ಪ್ರತಾಪ್ ಅವರ ಕಂಪನಿಗಳ ಜತೆಗೆ ವಹಿವಾಟು ನಡೆಸಿದ್ದರು. ಇವರು ಸಹ ಸರಕು ಪೂರೈಸದೇ ನಕಲಿ ಇನ್‌ವಾಯ್ಸ್ ಸೃಷ್ಟಿಸಿ, ಅಕ್ರಮವಾಗಿ ಐಟಿಸಿ ಪಡೆದುಕೊಂಡಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.
Fraud Case: ವಂಚನೆ ಪ್ರಕರಣ; ಬಿಗ್ ಬಾಸ್ ಖ್ಯಾತಿಯ ನಟ ಬಂಧನ
ಆರೋಪಿಗಳಿಗೆ ನ್ಯಾಯಾಂಗ ಬಂಧನ
ಈ ಪ್ರಕರಣದಲ್ಲಿ ನಾಲ್ವರು ಪ್ರಮುಖ ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಗೆ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.