ಇನ್ಶುರೆನ್ಸ್ ಹಣಕ್ಕಾಗಿ ತನ್ನ ಲವರ್ ಜೊತೆ ಹತ್ಯೆ ಪತ್ನಿಯೇ ಮಾಜಿ ಯೋಧನಾಗಿದ್ದ ತನ್ನ ಪತಿಯನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದ ನಿವಾಸಿ ಮಾಜಿ ಸೈನಿಕ ಸಂದೀಪ್ ಮೃತ ಮಾಜಿ ಯೋಧ. ಕೊಲೆ ಪ್ರಕರಣದಲ್ಲಿ ಆತನ ಪತ್ನಿ ಸುಮಾ, ಆಕೆಯ ಪ್ರಿಯಕರ ಸೇರಿ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪತಿಯನ್ನು ಕೊಂದಿದ್ದು ಮಾತ್ರವಲ್ಲದೇ ಅದನ್ನು ಸಹಜ ಸಾವು ಎಂದು ಬಿಂಬಿಸಲು ಪತ್ನಿ ಸುಮಾ ಅಧಿಕಾರಿಗಳೊಂದಿಗೆ ಸೇರಿ ಎಫ್ಎಸ್ಎಲ್ ವರದಿಯನ್ನೇ ತಿರುಚಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮಾಜಿ ಯೋಧ ಸಂದೀಪ್ ಹೆಸರಿನಲ್ಲಿದ್ದ 2 ಕೋಟಿ ರೂ ವಿಮೆ ಹಣಕ್ಕಾಗಿ ಆತನನ್ನು ಕೊಂದು ಸಹಜ ಸಾವು ಎಂದು ಬಿಂಬಿಸಲು ಆರೋಪಿಗಳು ಮುಂದಾಗಿದ್ದರು ಎಂದು ಹೇಳಲಾಗಿದೆ. ಸಂದೀಪ್ ಅವರು ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐಯಲ್ಲಿ ವಿಮಾ ಪಾಲಿಸಿಗಳನ್ನು ಹೊಂದಿದ್ದರು. ಅವರ ಅಪಘಾತದ ಸಾವಿನ ಸಂದರ್ಭದಲ್ಲಿ ಸುಮಾರು 2 ಕೋಟಿ ರೂ. ವಿಮಾ ಮೊತ್ತ ದೊರೆಯಲಿದೆ ಎಂಬ ನಂಬಿಕೆ ಆರೋಪಿಗಳಿಗೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಮೃತನ ಪತ್ನಿ, ಆಕೆಯ ಪ್ರಿಯಕರ ಹಾಗೂ ಕೆಲ ಸರ್ಕಾರಿ ನೌಕರರು ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು ಮೃತನ ಪತ್ನಿ ಸುಮಾ ಸಂದೀಪ್ ಮಂಜರಗಿ, ಸುಮಾ ಪ್ರಿಯಕರ ಪುಂಡಲೀಕ್ ವಿಠ್ಠಲ್ ಡೊಂಬಾರ್, RMP ವೈದ್ಯ ಡಾ. ಬಸವರಾಜ ಭಾಸ್ಮೆ, ಬೆಳಗಾವಿ ಆಯುಕ್ತರ ಕಚೇರಿಯ FDA ಅಧಿಕಾರಿ ಅಶೋಕ್ ಗುಜನಾಳ, ವಿಧಿವಿಜ್ಞಾನ ಪ್ರಯೋಗಾಲಯದ ಕ್ಲರ್ಕ್ ಅಪ್ಪಾಸಾಹೇಬ ನಾಯಕ್, ಪ್ರಯೋಗಾಲಯ ಸಹಾಯಕ ಚನ್ನಯ್ಯ ಅಡಿವಿಸ್ವಾಮಿಮಠ, ಹಿರಿಯ ವೈಜ್ಞಾನಿಕ ಅಧಿಕಾರಿ ಪಿ.ಎನ್. ನಾಗರಾಜ್, ಪುಂಡಲೀಕ್‌ನ ಸಹಚರ ಸಚಿನ್ ಸೆಳಾರ್ ಮತ್ತು ಫಾರ್ಮಸಿ ವಿದ್ಯಾರ್ಥಿ ಹಾಗೂ ಪುಂಡಲೀಕ್‌ನ ಸಹಚರ ರಾಹುಲ್ ಜೋಗಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.