ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದುರಂತ ಅಂತ್ಯಕಂಡ ತಡರಾತ್ರಿಯ ಇಸ್ಪೀಟ್ ಆಟ: ಪೊಲೀಸ್ ಬಂದರೆಂದು ಓಡಿ ಬಾವಿಗೆ ಬಿದ್ದ ನಾಲ್ವರು, ಮೂವರು ದುರ್ಮರಣ

fear of police raid: ಪೊಲೀಸ್ ದಾಳಿ ನಡೆಸುತ್ತಿದ್ದಾರೆ ಎಂದು ಶಂಕಿಸಿ ಪರಾರಿಯಾಗಲು ಯತ್ನಿಸಿದ ನಾಲ್ವರು ತೆರೆದ ಬಾವಿಗೆ ಬಿದ್ದಿದ್ದಾರೆ. ಅವರಲ್ಲಿ ಮೂವರು ಸಾವಿಗೀಡಾಗಿದ ಘಟನೆ ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ದಾಳಿ ನಡೆಯುತ್ತಿದೆ ಎಂದು ಭಯಭೀತರಾದ ಅವರು ಓಟಕ್ಕಿತ್ತಾಗ ಈ ದುರಂತ ನಡೆದಿದೆ.

ಸಾಂದರ್ಭಿಕ ಚಿತ್ರ

ಗಾಂಧಿನಗರ, ಆ.18: ತಡರಾತ್ರಿ ನಡೆದ ಇಸ್ಪೀಟ್ ಆಟ (playing cards) ದುರಂತದಲ್ಲಿ ಅಂತ್ಯವಾದ ಘಟನೆ ಗುಜರಾತ್‌ನ (Gujarat) ಭಾವನಗರ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ದಾಳಿ ನಡೆಸುತ್ತಿದ್ದಾರೆ ಎಂದು ಶಂಕಿಸಿ ಪರಾರಿಯಾಗಲು ಯತ್ನಿಸಿದ ನಾಲ್ವರು ತೆರೆದ ಬಾವಿಗೆ ಬಿದ್ದಿದ್ದಾರೆ. ಅವರಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಸೋಮವಾರ (ಆ.17) ತಡರಾತ್ರಿ ಕೃಷಿ ಜಮೀನಿನಲ್ಲಿ 11 ಜನರು ಇಸ್ಪೀಟೆಲೆ ಆಡುತ್ತಿದ್ದಾಗ ವಾಹನವೊಂದು ಬಂದಿದೆ. ಈ ವೇಳೆ ಮೂರು ಜನರು ಸ್ಥಳಕ್ಕಾಗಮಿಸಿದ್ದಾರೆ.

ಪೊಲೀಸ್ ದಾಳಿ ನಡೆಯುತ್ತಿದೆ ಎಂದು ಭಯಭೀತರಾದ ಅವರು ಓಡಲು ಪ್ರಾರಂಭಿಸಿದರು. ಗೊಂದಲ ಮತ್ತು ಕತ್ತಲೆಯಲ್ಲಿ ಓಡುತ್ತಿದ್ದಾಗ, ಅವರಲ್ಲಿ ನಾಲ್ವರು ತೆರೆದ ಕೃಷಿ ಬಾವಿಗೆ ಬಿದ್ದರು. ಅವರಲ್ಲಿ ಮೂವರು ಸಾವಿಗೀಡಾಗಿದ್ದು, ಒಬ್ಬಾತ ಬದುಕುಳಿದಿದ್ದಾನೆ. ಮೃತರನ್ನು ರಾಹುಲ್ ಪೋಪಟ್‌ಭಾಯಿ ಚೌಹಾಣ್ (35), ನೀಲೇಶ್ ದಾಭಿ (37) ಮತ್ತು ಅಜಿತ್‌ಸಿನ್ಹ್ (45) ಎಂದು ಗುರುತಿಸಲಾಗಿದೆ.

ಮಂಗಳವಾರ (ಆ.18) ಬೆಳಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಜಮೀನಿನಲ್ಲಿ ಮೃತದೇಹಗಳು ಬಿದ್ದಿರುವ ಬಗ್ಗೆ ಕರೆ ಬಂದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದಾಗ, ಬಾವಿಯಲ್ಲಿ ಮೂರು ಶವಗಳು ತೇಲುತ್ತಿರುವುದು ಕಂಡುಬಂದಿದೆ. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಾವನಗರದ ಸರ್ ಟಿ. ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವರ್ತೇಜ್ ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಡಿ.ಎನ್. ಜಡೇಜಾ ತಿಳಿಸಿದ್ದಾರೆ.

ಭಾರಿ ಸಂಚು ಬಯಲು ಮಾಡಿದ ಇನ್‌ಸ್ಟಾಗ್ರಾಮ್‌ ಫೋಟೊ; ಸೋಷಿಯಲ್‌ ಮೀಡಿಯಾದಲ್ಲಿ ಪಿಸ್ತೂಲ್ ಪ್ರದರ್ಶಿಸಿದ ಟ್ಯಾಕ್ಸಿ ಚಾಲಕನ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು 3 ಕೋಟಿ ರುಪಾಯಿ ನಗದು

ಘಟನೆಯ ನಂತರ, ಮೃತರ ಕುಟುಂಬ ಸದಸ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಪೊಲೀಸ್ ದಾಳಿ ನಡೆದಿದೆ ಎಂದು ಕುಟುಂಬಗಳು ಆರೋಪಿಸಿದ್ದು, ಕಾರ್ಯಾಚರಣೆಯ ಸಮಯದಲ್ಲಿ ಸಾವುಗಳು ಸಂಭವಿಸಿವೆ ಎಂದು ಹೇಳಿದರು.

ಆದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವರ್ತೇಜ್ ಪೊಲೀಸ್ ಠಾಣೆಯು ಸ್ಥಳದಲ್ಲಿ ಯಾವುದೇ ದಾಳಿ ನಡೆಸಿರುವುದನ್ನು ನಿರಾಕರಿಸಿದೆ. ಈ ಪ್ರದೇಶದಲ್ಲಿ ಯಾವುದೇ ಪೊಲೀಸ್ ಕಾರ್ಯಾಚರಣೆ ನಡೆಸಲಾಗಿಲ್ಲ ಎಂದು ವರ್ತೇಜ್ ಪೊಲೀಸ್ ಇನ್ಸ್‌ಪೆಕ್ಟರ್ ಪಧೇರಿಯಾ ಹೇಳಿದ್ದಾರೆ.

ವಾಹನದ ಆಗಮನವು ದಾಳಿ ನಡೆಯುತ್ತಿದೆ ಎಂದು ತಪ್ಪಾಗಿ ಭಾವಿಸಿರಬಹುದು. ಹಳ್ಳಿಯವರೇ ಯಾರೋ ತಮಾಷೆ ಮಾಡಿರಬಹುದು. ಇದು ಇಸ್ಪೀಟ್ ಆಡುತ್ತಿದ್ದ ಗುಂಪಿನಲ್ಲಿ ಭೀತಿಯನ್ನು ಉಂಟುಮಾಡಿರಬಹುದು ಎಂದು ಪಧೇರಿಯಾ ಹೇಳಿದ್ದಾರೆ. ಘಟನೆಯ ನಂತರ ಸ್ಥಳಕ್ಕೆ ಬಂದ ಮೂವರು ವ್ಯಕ್ತಿಗಳು ಅಲ್ಲಿಂದ ತೆರಳಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ಮೃತರ ಕುಟುಂಬ ಸದಸ್ಯರು ಶವಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ, ಪೊಲೀಸರು ಯಾವುದೇ ದಾಳಿ ನಡೆಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.