ಆಂಧ್ರಪ್ರದೇಶ: ವಸತಿ ಗೃಹದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ (death case) ಘಟನೆ ಆಂಧ್ರಪ್ರದೇಶದ (Andhra Pradesh) ನಂದ್ಯಾಲ್ ಜಿಲ್ಲೆಯ (Nandyal district) ಶ್ರೀಶೈಲಂ (Srisailam) ದೇವಾಲಯ ಪಟ್ಟಣದಲ್ಲಿ ನಡೆದಿದೆ. ವಸತಿ ಗೃಹದಲ್ಲಿ ಮಂಗಳವಾರ ಒಂದೇ ಕುಟುಂಬದ ಐವರು ಮೃತದೇಹಗಳು ಪತ್ತೆಯಾಗಿರುವುದಾಗಿ ಆತ್ಮಕೂರ್ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ರಾಮಾಂಜಿ ನಾಯಕ್ ತಿಳಿಸಿದ್ದಾರೆ. ಇವರು ಆರ್ಥಿಕ ಸಮಸ್ಯೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
ಶ್ರೀಶೈಲಂ ದೇವಾಲಯದ ವಸತಿ ಗೃಹದಲ್ಲಿ ಮಂಗಳವಾರ ಪತ್ತೆಯಾದ ಒಂದೇ ಕುಟುಂಬದ ಐವರು ಸದಸ್ಯರಲ್ಲಿ 36 ವರ್ಷದ ಒಬ್ಬ ವ್ಯಕ್ತಿ, 33, 45 ಮತ್ತು 50 ವರ್ಷ ವಯಸ್ಸಿನ ಮೂವರು ಸಹೋದರಿಯರು ಮತ್ತು 15 ವರ್ಷದ ಅವರ ಸೋದರಳಿಯ ಸೇರಿದ್ದಾನೆ. ಇವರೆಲ್ಲ ಶ್ರೀ ಸತ್ಯಸಾಯಿ ಜಿಲ್ಲೆಯವರು ಎಂದು ಅವರು ಡಿಎಸ್‌ಪಿ ತಿಳಿಸಿದರು.
ಮದುವೆಯಾಗುವುದಾಗಿ ನಂಬಿಸಿ ವಂಚನೆ ಆರೋಪ: ಕೆಎಸ್‌ಆರ್‌ಟಿಸಿ ಕಂಡಕ್ಟರ್ ವಿರುದ್ಧ ಮಹಿಳೆಯಿಂದ ದೂರು
ಶ್ರೀಶೈಲಂನಲ್ಲಿ ವಡ್ಡೇರ ಸಮುದಾಯ ನಡೆಸುತ್ತಿರುವ ವಸತಿ ಗೃಹ ವಡ್ಡೇರ ಸತ್ರಂನ ಕೋಣೆಯಲ್ಲಿ ಇವರ ಮೃತದೇಹಗಳು ಪತ್ತೆಯಾಗಿದೆ. ವ್ಯಕ್ತಿ ಮತ್ತು ಅಪ್ರಾಪ್ತರ ಶವ ಹಾಲ್ ನಲ್ಲಿದ್ದು, ಮೂವರು ಮಹಿಳೆಯರ ಮೃತದೇಹಗಳು ಸ್ನಾನಗೃಹದಲ್ಲಿ ಪತ್ತೆಯಾಗಿದೆ. ಇವರ ಕುಟುಂಬವು ಜುಲೈ 28 ರಂದು ಇಲ್ಲಿಗೆ ಬಂದಿದ್ದು, ಐವರು ಕೂಡ ಒಂದೇ ಕೋಣೆಯಲ್ಲಿ ತಂಗಿದ್ದರು. ದೈನಂದಿನ ಬಾಡಿಗೆ 800 ರೂಪಾಯಿ ಪಾವತಿಸಿದ್ದರು ಎಂದು ಅವರು ಹೇಳಿದರು.
ಹೆಚ್ಚಿನ ದಿನ ವಸತಿ ಗೃಹದಲ್ಲಿ ವಾಸಿಸಲು ಅನುಮತಿ ಇಲ್ಲದ ಕಾರಣ ಲಾಡ್ಜ್ ಅಧಿಕಾರಿಗಳು ಅವರಿಗೆ ಎರಡು ದಿನಗಳಲ್ಲಿ ಕೋಣೆ ಖಾಲಿ ಮಾಡಲು ತಿಳಿಸಿದ್ದಾರೆ. ಆದರೆ ತಾವು ಅಸ್ವಸ್ಥರಾಗಿದ್ದು ಇಲ್ಲೇ ಕೆಲವು ದಿನ ಇರುವುದಾಗಿ ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ಕುಟುಂಬದ ಯಾವುದೇ ಸದಸ್ಯರು ಕೂಡ ಕೋಣೆಯಿಂದ ಹೊರಗೆ ಬಾರದ ಕಾರಣ ವಸತಿ ಗೃಹದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಡಿಎಸ್‌ಪಿರಾಮಾಂಜಿ ನಾಯಕ್ ತಿಳಿಸಿದರು.
ಪೊಲೀಸರು ಸ್ಥಳಕ್ಕೆ ತೆರಳಿ ಕೊಠಡಿಯನ್ನು ಪರಿಶೀಲಿಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 36 ವರ್ಷದ ವ್ಯಕ್ತಿ ಅವಿವಾಹಿತ ಎಂದು ತಿಳಿದುಬಂದಿದೆ. ಆತನ ಇಬ್ಬರು ಸಹೋದರಿಯರು ತಮ್ಮ ಗಂಡನಿಂದ ದೂರವಾಗಿದ್ದು, ತವರು ಮನೆಯಲ್ಲೇ ವಾಸವಾಗಿದ್ದಾರೆ. ಕುಟುಂಬವು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದೆ. ಇದೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಬಥಲಪಲ್ಲಿಯಲ್ಲಿರುವ ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.
ಘಟನೆ ಬಗ್ಗೆ ಶ್ರೀಶೈಲಂ ದೇವಾಲಯದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು, ವಡ್ಡೇರಾ ಸತ್ರಂ ಆಡಳಿತ ಮಂಡಳಿಯು ವಸತಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ರಾವ್, ಭಕ್ತರು ಸಾಮಾನ್ಯವಾಗಿ ದೇವಾಲಯವು ಒದಗಿಸಿದ ವಸತಿ ಸೌಕರ್ಯದಲ್ಲಿ ಗರಿಷ್ಠ 48 ಗಂಟೆಗಳ ಕಾಲ ಉಳಿಯಬಹುದು. ಒಂದು ಕುಟುಂಬಕ್ಕೆ ದೀರ್ಘಕಾಲದವರೆಗೆ ಕೋಣೆಯಲ್ಲಿ ಉಳಿಯಲು ಅವಕಾಶ ನೀಡುವ ಮೂಲಕ ವಡ್ಡೇರಾ ಸತ್ರಂ ಆಡಳಿತ ಮಂಡಳಿಯು ನಿಯಮವನ್ನು ಉಲ್ಲಂಘಿಸಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಮುಂದೆ ಶ್ರೀಶೈಲಂನಲ್ಲಿರುವ ಎಲ್ಲಾ ವಸತಿ ಕಟ್ಟಡಗಳು ಭಕ್ತರಿಗೆ ಕೊಠಡಿಗಳನ್ನು ಮಂಜೂರು ಮಾಡುವಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಸತಿ ಕಟ್ಟಡಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಿದ್ದಾರೆ.