ಇಂಫಾಲ, ಅ. 19: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ (Manipur Violence). ಈ ಹತ್ಯೆಗಳನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ರಾಜಧಾನಿ ಇಂಫಾಲ ನಗರ ಬಹುತೇಕ ಸ್ತಬ್ಧಗೊಂಡಿದೆ.
ಪ್ರತಿಭಟನಾಕಾರರು ಮುಖ್ಯಮಂತ್ರಿ ಯುಮ್ನಾಮ್ ಖೇಮಚಂದ್ ಸಿಂಗ್ ನಿವಾಸದತ್ತ ಮೆರವಣಿಗೆ ನಡೆಸಿ, ಎರಡು ಮೃತದೇಹಗಳನ್ನು ನಿವಾಸದ ಹೊರಗೆ ಇರಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಿದ್ದು, ಅಶ್ರುವಾಯು ಪ್ರಯೋಗ ಮತ್ತು ಲಾಠಿ ಪ್ರಹಾರ ನಡೆಸಿದ್ದಾರೆ.
ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ:
ಮೊದಲ ಘಟನೆಯಲ್ಲಿ ಮೈತೇಯಿ ಮತ್ತು ಪಂಗಲ್ ಮುಸ್ಲಿಂ ಸಮುದಾಯದ ಜನರು ವಾಸಿಸುವ ಪ್ರದೇಶದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಹಿಂಸಾಚಾರ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡ 24 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ.
ಇನ್ನೊಂದು ಘಟನೆಯು ಇಂಫಾಲ್ ಪೂರ್ವ ಜಿಲ್ಲೆಯ ಖಮೆನ್ಲೋಕ್ ಪ್ರದೇಶದಲ್ಲಿ ನಡೆದಿದೆ. ಸಮೀಪದ ಬೆಟ್ಟಗಳಲ್ಲಿ ಉರುವಲು ಸಂಗ್ರಹಿಸಲು ತೆರಳಿದ್ದ ಮೂವರು ಗ್ರಾಮಸ್ಥರನ್ನು ಶಂಕಿತ ಬುಡಕಟ್ಟು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಮತ್ತೂ ಮೂವರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಕುಕಿ ಉಗ್ರಗಾಮಿ ಸಂಘಟನೆಗಳ ಉಪಸ್ಥಿತಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರ ಗುರುತು ಪತ್ತೆ
ಸ್ಥಳೀಯ ಶಾಸಕ ತೋಕ್ಚೋಮ್ ಲೋಕೇಶೋರ್ ಸಿಂಗ್ ಅವರ ಪ್ರಕಾರ, ಇಂಫಾಲ ಪೂರ್ವ ಮತ್ತು ಕುಕಿ ಸಮುದಾಯದ ಪ್ರಾಬಲ್ಯವಿರುವ ಕಾಂಗ್ಪೋಕ್ಪಿ ಜಿಲ್ಲೆಯ ಗಡಿಯ ಸಮೀಪ ಉರುವಲು ಸಂಗ್ರಹಿಸುತ್ತಿದ್ದ ವೇಳೆ ಗ್ರಾಮಸ್ಥರ ಮೇಲೆ ದಾಳಿ ನಡೆದಿದೆ.
ಮೃತರನ್ನು ನೊಂಗ್ಶುಮ್ ಮಾಯೈ ಲೀಕೈ ನಿವಾಸಿ ರಾಜಾ ಅವರ ಪುತ್ರ ಅರುಬಮ್ ರೋನಿಲ್ (35), ಉಯುಂಪೋಕ್ ನೊಂಗ್ಶುಮ್ ಅವಾಂಗ್ ಲೀಕೈ ನಿವಾಸಿ ತೋಂಬಿ ಅವರ ಪುತ್ರ ಲೈರೆನ್ಲಕ್ಪಮ್ ಇನಾಬಿ (44) ಹಾಗೂ ಉಯುಂಪೋಕ್ ಮಾಯೈ ಲೀಕೈ ನಿವಾಸಿ ಕೆ.ಎಸ್. ದೇವೆನ್ ಅವರ ಪುತ್ರ ಕ್ಷೇತ್ರಿಮಯುಮ್ ಸುಶೀಲ್ (32) ಎಂದು ಗುರುತಿಸಲಾಗಿದೆ.
ಗಾಯಾಳುಗಳಿಗೆ ಚಿಕಿತ್ಸೆ
ಮುಖ್ಯಮಂತ್ರಿ ಯುಮ್ನಾಮ್ ಖೇಮಚಂದ್ ಸಿಂಗ್ ಇಂಫಾಲದ ರಾಜ್ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಹಿಂಸಾಚಾರದ ಬಳಿಕ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿರುವ ಶಾಸಕ ಲೋಕೇಶೋರ್ ಸಿಂಗ್, ಅಧಿಕಾರಿಗಳು ತಕ್ಷಣ ಮಧ್ಯ ಪ್ರವೇಶಿಸಬೇಕು ಮತ್ತು ಘಟನಾ ಸ್ಥಳದ ಸಮೀಪದಲ್ಲಿರುವ ಸಿನೈ ಕ್ಯಾಂಪ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಉರುವಲು ಸಂಗ್ರಹಿಸಲು ತೆರಳಿದ್ದ ಗ್ರಾಮಸ್ಥರಿಗೆ ರಕ್ಷಣೆ ನೀಡುವುದಾಗಿ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಭರವಸೆ ನೀಡಿದ್ದರು ಎಂದೂ ಅವರು ತಿಳಿಸಿದ್ದಾರೆ.
ಮೈತೇಯಿ–ಕುಕಿ ಸಮುದಾಯಗಳ ನಡುವೆ ಮತ್ತೆ ಆತಂಕ
2023ರ ಮೇಯಲ್ಲಿ ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಹಿಂಸಾಚಾರದ ಬಳಿಕ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಇದೀಗ ನಡೆದಿರುವ ಹತ್ಯೆಗಳು ಎರಡೂ ಸಮುದಾಯಗಳ ನಡುವಿನ ಅವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವ ಆತಂಕ ಮೂಡಿಸಿವೆ.
ಇಂಫಾಲ್ ಪೂರ್ವ–ಕಾಂಗ್ಪೋಕ್ಪಿ ಗಡಿಯ ಸೂಕ್ಷ್ಮ ಪ್ರದೇಶದಲ್ಲಿ ನಡೆದಿರುವ ಈ ಘಟನೆಗಳ ಹಿನ್ನೆಲೆಯಲ್ಲಿ, ಹಿಂಸಾಚಾರ ಮತ್ತಷ್ಟು ವ್ಯಾಪಿಸದಂತೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.