ಮುಂಬೈ, ಜೂ. 13: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವತಿಯ ಮೇಲೆ ವ್ಯಕ್ತಿಯೊಬ್ಬ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಪಾಲ್ಘರ್‌ನಲ್ಲಿ ನಡೆದಿದೆ. ಆರೋಪಿಯನ್ನು ಅಮೋಲ್ ಮುಲೆ ಎಂದು ಗುರುತಿಸಲಾಗಿದೆ. ಆತ ನ್ಯಾಯಾಲಯದ ಗುಮಾಸ್ತನಾಗಿದ್ದು, ಪ್ರಸ್ತುತ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಬಲೆ ಬೀಸಿದ್ದು, ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಶುಕ್ರವಾರ (ಜೂ. 12) ಸಂಜೆ 6:15ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ನೇಹಲ್ ಸಾವಂತ್ ಪಾಲ್ಘರ್ ಜಿಲ್ಲಾ ಕಲೆಕ್ಟರ್ ಕಚೇರಿಯಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ನೇಹಲ್ ಸಾವಂತ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಹಿಂದಿನಿಂದ ಓಡಿ ಬಂದು ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ಕುತ್ತಿಗೆ, ಬೆನ್ನು, ಭುಜಗಳು ಮತ್ತು ಸೊಂಟದ ಮೇಲೆ ಸುಮಾರು ಎಂಟು ಬಾರಿ ಇರಿದಿದ್ದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಭೀಕರ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ:
ಸ್ನೇಹಲ್ ಸಾವಲ್ ಕುಸಿದು ಬಿದ್ದರೂ ಅಮೋಲ್ ಮುಲೆ ಸ್ಥಳದಿಂದ ಪರಾರಿಯಾಗುವ ಮೊದಲು ಆಕೆಗೆ ಹೊಡೆದಿದ್ದಾನೆ. ಇಡೀ ಘಟನೆಯು ಹತ್ತಿರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದಾಳಿಯ ನಂತರ ಆತ ತನ್ನ ಬ್ಯಾಗ್ ಮತ್ತು ಆಯುಧವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ರಸ್ತೆಯ ಮೇಲೆ ಬಿದ್ದಿದ್ದ ಗಾಯಗೊಂಡ ಮಹಿಳೆಯನ್ನು ಗಮನಿಸಿದ ವ್ಯಕ್ತಿಯೊಬ್ಬರು ವಾಹನ ನಿಲ್ಲಿಸಿದ್ದು, ಬಳಿಕ ಸ್ತಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದರು.
ಮಹಾರಾಷ್ಟ್ರಕ್ಕೂ 'ಝಾಂಬಿ ಡ್ರಗ್' ಆತಂಕ: ರಸ್ತೆಯಲ್ಲೇ ಒಂದೇ ಭಂಗಿಯಲ್ಲಿ ನಿಂತ ವ್ಯಕ್ತಿ!
ಗಾಯಗೊಂಡ ಮಹಿಳೆಯನ್ನು ಆರಂಭದಲ್ಲಿ ಪಾಲ್ಘರ್‌ನ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪಾಲ್ಘರ್ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿತು. ಪಾಲ್ಘರ್ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶಮುಖ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಕಾರಣವೇನು?
ದಾಳಿಗೆ ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಅಮೋಲ್ ಮುಲೆಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಎಂದು ತಿಳಿಸಿದ್ದಾರೆ.