ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Guwahati Shootout: 5 ಮಂದಿಯನ್ನು ಬಲಿ ಪಡೆದ ಹೊಟೇಲ್‌ ಮೇಲಿನ ಭೀಕರ ದಾಳಿಗೆ ದಾಳಿಯ ಕಾರಣ ಬಹಿರಂಗ; ಗುತ್ತಿಗೆ ವಿವಾದದಿಂದಲೇ ನರಮೇಧ?

ಅಸ್ಸಾಂನ ಗುವಾಹಟಿಯ ಹೊಟೇಲ್‌ ಬಿಲಾಸ್ ಇನ್‌ನಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾರೆ. ಹೊಟೇಲ್‌ ಗುತ್ತಿಗೆಗೆ ಸಂಬಂಧಿಸಿದ ಆಸ್ತಿ ವಿವಾದವೇ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಘನಕಾಂತ ಗೊಗೊಯ್‌ನನ್ನು ಘಟನೆ ನಡೆದ ಒಂದು ಗಂಟೆಯೊಳಗೆ ಬಂಧಿಸಲಾಗಿದ್ದು, ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಡಾ. ಪಾರ್ಥ ಸಾರಥಿ ಮಹಂತ ಮತ್ತು ಗುವಾಹಟಿ ಹೊಟೇಲ್‌

ದಿಸ್ಪುರ, ಅ. 27: ಅಸ್ಸಾಂನ ಗುವಾಹಟಿ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 5 ಮಂದಿ ಬಲಿಯಾಗಿದ್ದು ಇದಕ್ಕೆ ಹೊಟೇಲ್‌ ಗುತ್ತಿಗೆಗೆ (Hotel Lease) ಸಂಬಂಧಿಸಿದ ಆಸ್ತಿ ವಿವಾದವೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಗುವಾಹಟಿಯ ಲಚಿತ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುವಾಹಟಿಯ ಬೋರಾ ಸರ್ವೀಸ್ ಪ್ರದೇಶದಲ್ಲಿರುವ ಹೋಟೆಲ್ ಬಿಲಾಸ್ ಇನ್‌ನಲ್ಲಿ ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದೆ. ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಘನಕಾಂತ ಗೊಗೊಯ್ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಒಂದು ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ದಾಳಿಗೆ ಬಳಸಿದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಗುವಾಹಟಿ ಪೊಲೀಸ್ ಆಯುಕ್ತ ಡಾ. ಪಾರ್ಥ ಸಾರಥಿ ಮಹಂತ ತಿಳಿಸಿದ್ದಾರೆ.

ಮೃತರಾದ ಐವರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಮೃತ ಮತ್ತೋರ್ವ ವ್ಯಕ್ತಿ ಹಾಗೂ ಗಾಯಗೊಂಡವರು ಒಂದೇ ಗ್ರಾಮದ ನಿವಾಸಿಗಳಾಗಿದ್ದಾರೆ. ಹೋಟೆಲ್ ಬಿಲಾಸ್ ಇನ್‌ನ ಮಾಲಕಿ ಹೆಲೆನಾ ಭರಾಲಿ ಮತ್ತು ಅವರ ಪುತ್ರ ಮೃತಪಟ್ಟವರಲ್ಲಿ ಇಬ್ಬರಾಗಿದ್ದು, ಉಳಿದ ಮೃತರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಿಲ್ಲ.

ಗುತ್ತಿಗೆ ವಿವಾದದ ಆಯಾಮದಲ್ಲಿ ತನಿಖೆ

ಹೊಟೇಲ್‌ನ ಮಾಲೀಕರ ಕಡೆಯವರು ಹಾಗೂ ಆಸ್ತಿಯನ್ನು ಗುತ್ತಿಗೆಗೆ ಪಡೆದ ವ್ಯಕ್ತಿಯ ನಡುವೆ ಉಂಟಾಗಿದ್ದ ವಿವಾದವೇ ಗುಂಡಿನ ದಾಳಿಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಸಿಇಸಿ ಜ್ಞಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರ ಆರೋಪ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಹೊಟೇಲ್‌ನ ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿದ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಘಟನೆಯ ಹಿಂದಿನ ನಿಖರ ಕಾರಣ ಮತ್ತು ಘಟನೆ ನಡೆದ ಸಂದರ್ಭಗಳ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ.

ವೈಜ್ಞಾನಿಕ ವಿಧಾನಗಳ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ತನಿಖೆ ಮುಂದುವರಿದಿದೆ. ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾದಂತೆ ವಿವರಗಳನ್ನು ನೀಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಗಾಯಾಳುವಿಗೆ ಚಿಕಿತ್ಸೆ

ಗುವಾಹಟಿಯ ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (GMCH) ಪ್ರಾಂಶುಪಾಲ ಹಾಗೂ ಪ್ರಭಾರ ಮುಖ್ಯ ಅಧೀಕ್ಷಕ ಪ್ರೊ. ಬಾಬುಲ್ ಕುಮಾರ್ ಬೆಜ್ಬರುವಾ ಅವರ ಪ್ರಕಾರ, ಆರಂಭದಲ್ಲಿ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅವರಲ್ಲಿ ಒಬ್ಬರನ್ನು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು.

ಗುಂಡಿನ ದಾಳಿಯಲ್ಲಿ ಗಾಯಗೊಂಡ ಮತ್ತೊಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಗುತ್ತಿಗೆ ವಿವಾದ ಮತ್ತು ಗುಂಡಿನ ದಾಳಿಯ ನಡುವಿನ ಸಂಬಂಧವನ್ನು ಪರಿಶೀಲಿಸುತ್ತಿದ್ದಾರೆ.