ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ–44ರಲ್ಲಿ ಫಾರ್ಚುನರ್ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ದೇವಸ್ಥಾನ ಹೊಸಹಳ್ಳಿ ಗೇಟ್ ಸಮೀಪ ಶುಕ್ರವಾರ ನಡೆದಿದೆ. ಮೃತರನ್ನು ದೇವಸ್ಥಾನ ಹೊಸಹಳ್ಳಿ ಗ್ರಾಮದ ಮುನಿರಾಜು (64) ಎಂದು ಗುರುತಿಸಲಾಗಿದೆ.
ಮುನಿರಾಜು ಅವರು ತಮ್ಮ ಗ್ರಾಮದಿಂದ ಬೈಕ್‌ನಲ್ಲಿ ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಗೆ ಬಂದು ಹೂ ಮಾರಾಟ ಮಾಡಿದ್ದರು. ಬಳಿಕ ನೆರೆಯ ಗುವ್ವಲಕಾನಹಳ್ಳಿಗೆ ಹಸು ಖರೀದಿಸುವ ಸಲುವಾಗಿ ತೆರಳಿ, ವಾಪಸ್ ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ ಹೊಸಹಳ್ಳಿ ಗೇಟ್ ಬಳಿ ರಸ್ತೆ ದಾಟಲು ಮುಂದಾ ಗಿದ್ದರು. ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಕಡೆಯಿಂದ ಬಾಗೇಪಲ್ಲಿ ಕಡೆಗೆ ವೇಗವಾಗಿ ಬರುತ್ತಿದ್ದ ಫಾರ್ಚುನರ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: Vijayapura Car Accident: ವಿಜಯಪುರದಲ್ಲಿ ಭೀಕರ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ತಾಯಿ, ಇಬ್ಬರು ಮಕ್ಕಳ ಸಾವು
ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ಮುನಿ ರಾಜು ಅವರನ್ನು ಸ್ಥಳೀಯರು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ಫಾರ್ಚುನರ್ ಕಾರಿನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.