ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಲ್ಲಿ ಭೀಕರ ಹತ್ಯಾಕಾಂಡ: ಪತ್ನಿ ಮೇಲಿನ ದ್ವೇಷಕ್ಕೆ ಒಂದೇ ಕುಟುಂಬದ 7 ಜನರನ್ನು ಕೊಂದ ವ್ಯಕ್ತಿ

ನಗರದ ಶ್ರೀರಾಮಪುರದಲ್ಲಿ ಕೌಟುಂಬಿಕ ಕಲಹ ಹಾಗೂ ಪತ್ನಿ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಒಂದೇ ಕುಟುಂಬದ 7 ಜನರನ್ನು ರುಬ್ಬುಗುಂಡಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.

ಸಂಗ್ರಹ ಚಿತ್ರ

ಬೆಂಗಳೂರು: ನಗರದ ಶ್ರೀರಾಮಪುರದಲ್ಲಿ ಕೌಟುಂಬಿಕ ಕಲಹ ಹಾಗೂ ಪತ್ನಿ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಬ್ (Bengaluru Crime) ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಒಂದೇ ಕುಟುಂಬದ 7 ಜನರನ್ನು ರುಬ್ಬುಗುಂಡಿನಿಂದ ಜಜ್ಜಿ ಬರ್ಬರವಾಗಿ ಕೊಲೆ (Murder Case) ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಸಾಮೂಹಿಕ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಮೊಮ್ಮಗ ಪುನೀತ್ ಮೃತಪಟ್ಟ ದುರ್ದೈವಿಗಳು. ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಇಂದುಶೇಖರ್, ಪತ್ನಿ ತನ್ನ ತವರು ಮನೆಯವರೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದಕ್ಕೆ ಅಸಮಾಧಾನ ಹೊಂದಿದ್ದ ಎನ್ನಲಾಗಿದೆ.

ಪತ್ನಿ ಮತ್ತು ಆಕೆಯ ತವರು ಮನೆಯವರ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಆರೋಪಿ, ಇಡೀ ಕುಟುಂಬವನ್ನೇ ಮುಗಿಸಲು ಸಂಚು ರೂಪಿಸಿದ್ದ. ಮೊದಲು ಪತ್ನಿಯನ್ನು ತನ್ನ ಮನೆಯಲ್ಲೇ ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ. ಬಳಿಕ ಆಕೆಯ ಕುಟುಂಬದವರಿಗೆ ಅನುಮಾನ ಬಾರದಂತೆ ಸುನೀತಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ನಂತರ ಮದ್ಯಪಾನದ ನೆಪದಲ್ಲಿ ಭಾಮೈದರಾದ ಶಿವಕುಮಾರ್ ಮತ್ತು ಶಂಕರ್ ಅವರನ್ನು ಮನೆಗೆ ಕರೆಸಿ ಹತ್ಯೆ ಮಾಡಿದ್ದಾನೆ. ಬಳಿಕ ಅವರ ಪತ್ನಿಯರಾದ ನಳಿನಿ, ದಿವ್ಯಾ, ಅತ್ತೆ ರೂಪವತಿ ಹಾಗೂ ಬಾಲಕ ಪುನೀತ್‌ನನ್ನು ಕೊಂದಿದ್ದಾನೆ.

ನಳಿನಿ ನಿಗೂಢವಾಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಇಂದುಶೇಖರ್‌ನನ್ನು ವಿಚಾರಣೆ ನಡೆಸಿದಾಗ ಆತ ಗೊಂದಲಮಯ ಹೇಳಿಕೆಗಳನ್ನು ನೀಡಿದ್ದಾನೆ. ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ವೇಳೆ ಆರೋಪಿ ಕೃತ್ಯ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ: ವಾಟ್ಸ್‌ಆ್ಯಪ್‌ ಚಾಟ್‌ ಮೂಲಕ ಪತ್ನಿಯ ಕೊಲೆ ಸಂಚು ಬಯಲು

ಹತ್ಯೆಯ ನಂತರ ಸಿಕ್ಕಿಬೀಳುವ ಭಯದಿಂದ ಆರೋಪಿ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ. ಮನೆಯ ರಕ್ತದ ಕಲೆಗಳನ್ನು ಹಾಗೂ ಕೊಲೆಗೆ ಬಳಸಿದ ರುಬ್ಬುಗುಂಡನ್ನು ರಾಸಾಯನಿಕ ಬಳಸಿ ತೊಳೆದಿದ್ದ. ಅಷ್ಟೇ ಅಲ್ಲದೆ, ಶವಗಳನ್ನು ಪತ್ತೆ ಹಚ್ಚಬಾರದೆಂದು ಬೇರೆ ಬೇರೆ ಕಡೆ ಎಸೆದಿದ್ದ. ಮೃತರ ಪೈಕಿ ಸುನಿತಾ ಅವರ ಸಹೋದರ ಪುನೀತ್ ಎಂಬಾತನ ಶವ ನಂದಿಬೆಟ್ಟದ ಪ್ರಪಾತದಲ್ಲಿ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Vishakha Bhat Heggar

View all posts by this author