ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಗಂಟಲು ಸೀಳಿ ಕೊಂದ ಶಾಲಾ ಹಾಸ್ಟೆಲ್ ಸೆಕ್ಯುರಿಟಿ!

ಬಿಹಾರದ ಜಹಾನಾಬಾದ್ ಜಿಲ್ಲೆಯಲ್ಲಿ ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ 5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕ್ಯಾಂಟೀನ್ ಕಾವಲುಗಾರನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ, ದೌರ್ಜನ್ಯ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸಾಂದರ್ಭಿಕ ಚಿತ್ರ

ಪಟನಾ: ಬಿಹಾರ (Bihar)ದ ಜಹಾನಾಬಾದ್ (Jehanabad) ಜಿಲ್ಲೆಯ ವಸತಿ ಶಾಲೆಯೊಂದರ ಹಾಸ್ಟೆಲ್‌ನಲ್ಲಿ ಈ ವಾರದ ಆರಂಭದಲ್ಲಿ ನಡೆದ ಐದು ವರ್ಷದ ಬಾಲಕನ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಶಾಲೆಯ ಕ್ಯಾಂಟೀನ್ ಕಾವಲುಗಾರನೇ ಈ ಘೋರ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ (Physical abuse) ಎಸಗಿದ ನಂತರ ಆತನ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು.

ಕೊಲೆಗೆ ಬಳಸಿದ್ದ ಹರಿತವಾದ ಬ್ಲೇಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, 46 ವರ್ಷದ ಕಾವಲುಗಾರ ಮುಖೇಶ್ ಅಲಿಯಾಸ್ ಸುದಾಮ (Mukesh alias Sudama)ನನ್ನು ಬಂಧಿಸಲಾಗಿದೆ. ಹಾಸ್ಟೆಲ್ ಸಂಚಾಲಕ ತರುಣ್ ಕುಮಾರ್ (Tarun Kumar) ಎಂಬುವವರನ್ನು ಸಹ ಈ ಮೊದಲೇ ವಶಕ್ಕೆ ಪಡೆಯಲಾಗಿತ್ತು.

ವಿಚಾರಣೆಯಲ್ಲಿ ಬಯಲಾದ ಕಹಿ ಸತ್ಯ

ಪೊಲೀಸ್ ಅಧೀಕ್ಷಕ ಅಪರಾಜಿತ್ ಲೋಹನ್ ಅವರ ಪ್ರಕಾರ, ಮುಖೇಶ್‌ನ ಪತ್ನಿ ವರ್ಷಗಳ ಹಿಂದೆಯೇ ಆತನನ್ನು ತೊರೆದಿದ್ದಳು. ಹಾಸ್ಟೆಲ್‌ನ ಮಕ್ಕಳು ಆತನನ್ನು 'ನಪುಂಸಕ' ಎಂದು ಅಣಕಿಸುತ್ತಿದ್ದರು, ಇದು ಆತನನ್ನು ತೀವ್ರವಾಗಿ ಕೆರಳಿಸಿತ್ತು. ಅಲ್ಲದೆ, ಮುಖೇಶ್‌ಗೆ ಹಾಸ್ಟೆಲ್ ಸಂಚಾಲಕನೊಂದಿಗೆ ಜಗಳವಿತ್ತು. ಹೀಗಾಗಿ ಹಾಸ್ಟೆಲ್‌ನ ಹೆಸರನ್ನು ಹಾಳುಗೆಡವಿ ಅದನ್ನು ಮುಚ್ಚಿಸುವಂತೆ ಮಾಡುವುದಾಗಿ ಆತ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ, ಬಲವಂತದ ಮತಾಂತರ ಆರೋಪ; ಹೈಕೋರ್ಟ್ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಭಾನುವಾರ ರಾತ್ರಿ ಮುಖೇಶ್ ಮಗುವನ್ನು ಆಮಿಷವೊಡ್ಡಿ ತನ್ನ ಕೋಣೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗು ಕಿರುಚಾಡಬಹುದು ಮತ್ತು ತನ್ನ ಬಂಧನವಾಗಬಹುದು ಎಂಬ ಭಯದಿಂದ, ಆತ ಬಾಲಕನ ಗಂಟಲು ಸೀಳಿ ಕೊಲೆ ಮಾಡಿ, ಶವವನ್ನು ಹಾಸ್ಟೆಲ್‌ನ ಮೆಟ್ಟಿಲುಗಳ ಮೇಲೆ ಎಸೆದಿದ್ದನು.

ತಂದೆಯ ಆಕ್ರೋಶ ಮತ್ತು ಎಫ್‌ಐಆರ್

ಮರುದಿನ ಬೆಳಿಗ್ಗೆ ಮಗುವಿನ ತಂದೆಗೆ ಹಾಸ್ಟೆಲ್ ಸಂಚಾಲಕ ಕುಮಾರ್ ಅವರಿಂದ ಕರೆ ಬಂದಿದ್ದು, ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿತ್ತು. ಆಸ್ಪತ್ರೆಗೆ ಹೋಗಿ ನೋಡಿದಾಗ ಮಗುವಿನ ಗಂಟಲು ಸೀಳಲಾಗಿತ್ತು, ಜನನಾಂಗವನ್ನು ಕತ್ತರಿಸಲಾಗಿತ್ತು ಮತ್ತು ಹೊಟ್ಟೆಯ ಎಡಭಾಗದಲ್ಲಿ ಗಂಭೀರವಾದ ಗಾಯಗಳಿದ್ದವು ಎಂದು ಎಫ್‌ಐಆರ್ (FIR) ನಲ್ಲಿ ಉಲ್ಲೇಖಿಸಲಾಗಿದೆ. ತಕ್ಷಣ ಮಗುವನ್ನು ಪಾಟ್ನಾದ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು.

ಪೊಲೀಸರು ಈ ಪ್ರಕರಣದಲ್ಲಿ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ವೇಳೆ ದೊರೆತ ಮಹತ್ವದ ಸುಳಿವುಗಳ ಆಧಾರದ ಮೇಲೆ ಮುಖೇಶ್‌ನನ್ನು ವಶಕ್ಕೆ ಪಡೆದಾಗ, ತಾನು ಮದ್ಯದ ಅಮಲಿನಲ್ಲಿದ್ದಾಗ ಈ ಕೃತ್ಯ ಎಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.