ಚಂಡೀಗಢ, ಮಾ. 31: ಎಲ್‌ಪಿಜಿ ಬುಕ್ಕಿಂಗ್‌ನಿಂದ (LPG booking) ವರ್ಷಗಳ ಕಾಲ ತಲೆ ಮರೆಸಿಕೊಂಡಿರುವ ಕೊಲೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಕೊಲೆ ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿರುವ ವಿಲಕ್ಷಣ ಘಟನೆ ನಡೆದಿದೆ. ಪತ್ನಿಯ ಕೊಲೆ ಪ್ರಕರಣದಲ್ಲಿ ಶಿಕ್ಷೆಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ (Punjab-Haryana High Court) ಎತ್ತಿಹಿಡಿದ ನಂತರ ನಾಲ್ಕು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಭಾರತೀಯ ಸೇನೆಯ ಮಾಜಿ ಕ್ಯಾಪ್ಟನ್‌ನನ್ನು ಬಂಧಿಸಲು ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ಪೊಲೀಸರಿಗೆ ಸಹಾಯ ಮಾಡಿದೆ (Crime News).
ಹೌದು, ಸಂದೀಪ್ ತೋಮರ್ ಎಂಬಾತನನ್ನು ಮಧ್ಯಪ್ರದೇಶದ ಪಂಧುರ್ಣ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2013ರಲ್ಲಿ ತೋಮರ್ ತನ್ನ ಪತ್ನಿ ಶ್ವೇತಾ ಸಿಂಗ್ ಅವರನ್ನು ಹತ್ಯೆ ಮಾಡಿದ್ದ. ಈ ವೇಳೆ ಅವರನ್ನು ಅಬೋಹರ್‌ನಲ್ಲಿ ನಿಯೋಜನೆಗೊಳಿಸಲಾಗಿತ್ತು. ಆರಂಭದಲ್ಲಿ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದ. ಆದರೆ ನಂತರ ವಿವರವಾದ ತನಿಖೆಯಲ್ಲಿ ಇದು ಯೋಜಿತ ಕೊಲೆ ಎಂದು ತಿಳಿದುಬಂತು ಎಂದು ಪೊಲೀಸರು ತಿಳಿಸಿದ್ದಾರೆ.
ವಯಸ್ಸು 40 ದಾಟಿದ್ರೂ ಮದುವೆ ಮಾಡಿಲ್ಲ ಎಂದು ತಾಯಿಯನ್ನೇ ಕೊಲ್ಲಲು ಯತ್ನಿಸಿದ ಪಾಪಿ ಮಗ!
ವಿಚಾರಣಾ ನ್ಯಾಯಾಲಯವು 2014ರಲ್ಲಿ ಆತನನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ನಂತರ 2022ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿಯಿತು. ತೋಮರ್‌ಗೆ 2019ರಲ್ಲಿ ಜಾಮೀನು ನೀಡಲಾಯಿತು. ಆದರೆ 2022ರಲ್ಲಿ ಹೈಕೋರ್ಟ್ ಆತನ ಶಿಕ್ಷೆಯನ್ನು ಎತ್ತಿಹಿಡಿದ ನಂತರವೂ ಶರಣಾಗಲಿಲ್ಲ.
ಅಂದಿನಿಂದ, ಬಂಧನದಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ತನ್ನ ಸ್ಥಳ ಮತ್ತು ಗುರುತನ್ನು ಬದಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತೋಮರ್‌ನ ಮಾವ ರಾಮ್ ನರೇಶ್ 2024ರಲ್ಲಿ ಅಪರಾಧಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನಂತರ ಹೈಕೋರ್ಟ್, ಪಂಜಾಬ್ ಪೊಲೀಸ್ ಮಹಾನಿರ್ದೇಶಕರು ತೋಮರ್‌ನನ್ನು ವಶಕ್ಕೆ ಪಡೆಯಲು ತೆಗೆದುಕೊಂಡ ಕ್ರಮಗಳನ್ನು ವಿವರಿಸುವ ಅಫಿಡವಿಟ್ ಸಲ್ಲಿಸಬೇಕೆಂದು ಆದೇಶಿಸಿತು. ನಂತರ ಫಜಿಲ್ಕಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತೋಮರ್ ಅವರನ್ನು ಬಂಧಿಸಲು ಎಸ್‌ಪಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದರು.
ಸಿಕ್ಕಿಬಿದ್ದಿದ್ದು ಹೇಗೆ?
ತೋಮರ್ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ಬಳಸಿದ್ದ ಪ್ಯಾನ್ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಫಜಿಲ್ಕಾ ಪೊಲೀಸರು ಪತ್ತೆಹಚ್ಚಿದಾಗ ಆತನ ವಿವರ ಹೊರ ಬಿದ್ದಿದೆ. ಈ ಸುಳಿವು ಆಧರಿಸಿ, ಪೊಲೀಸರು ಮಧ್ಯಪ್ರದೇಶದವರೆಗೆ ಆತನ ಇರುವಿಕೆಯ ಜಾಡು ಹಿಡಿದು ಸಾಗಿದರು. ಕೊನೆಗೂ ಅಲ್ಲಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಲಹ, ಖಿನ್ನತೆ: ಟೆಕ್ಕೀ ದಂಪತಿ ಆತ್ಮಹತ್ಯೆ
ತೋಮರ್‌ನ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ಆತ ಪಂಧುರಾದ ಏಜೆನ್ಸಿಯಿಂದ ಎಲ್‌ಪಿಜಿ ಸಿಲಿಂಡರ್ ಮರುಪೂರಣವನ್ನು ಪಡೆಯುತ್ತಿದ್ದರು ಎಂದು ತಿಳಿದುಬಂದಿರುವುದಾಗಿ ತನಿಖಾ ತಂಡದ ಅಧಿಕಾರಿಯೊಬ್ಬರು ಹೇಳಿದರು. ಹೀಗಾಗಿ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಲಾಯಿತು. ನಂತರ ವಿಳಾಸವನ್ನು ತೆಗೆದುಕೊಳ್ಳಲಾಯಿತು.
ಈ ಮಾಹಿತಿಯನ್ನು ಪಂಧುರ್ನ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಲಾಗಿದ್ದು, ಸ್ಥಳೀಯ ಪೊಲೀಸರು ತಕ್ಷಣವೇ ಅಪರಾಧಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂತರ ಆತನನ್ನು ಫಜಿಲ್ಕಾಗೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.