ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಲವಂತದಿಂದ ಯೂರಿಯಾ ಕುಡಿಸಿ ಗರ್ಭಿಣಿ ಪತ್ನಿಯ ಭೀಕರ ಕೊಲೆ; ನೇಣು ಬಿಗಿದು ಆತ್ಮಹತ್ಯೆಯ ನಾಟಕವಾಡಿದ ಪತಿ ಸಿಕ್ಕಿಬಿದ್ದಿದ್ದು ಹೇಗೆ?

Crime News: ಗರ್ಭಿಣಿ ಪತ್ನಿಗೆ ಯೂರಿಯಾ ಕುಡಿಸಿ ಕೊಂದ ಪತಿ, ಬಳಿಕ ಆತ್ಮಹತ್ಯೆ ಎಂದು ಬಿಂಬಿಸುವ ಸಲುವಾಗಿ ಆಕೆಯ ಶವವನ್ನು ನೇಣು ಬಿಗಿದಿದ್ದಾನೆ. ಪೊಲೀಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷೆ ವರದಿಯಲ್ಲಿ, ಆಕೆಯ ಸಾವು ನೇಣು ಬಿಗಿದುಕೊಂಡಿದ್ದರಿಂದ ಸಂಭವಿಸಿಲ್ಲ, ಬದಲಾಗಿ ವಿಷಕಾರಿ ವಸ್ತು ಸೇವಿಸಿದ್ದರಿಂದ ಸಂಭವಿಸಿದೆ ಎಂದು ತಿಳಿದುಬಂದಿದೆ. ಆ ಮೂಲಕ ಪಾಪಿಯ ಕೃತ್ಯ ಬೆಳಕಿಗೆ ಬಂದಿದೆ.

ಮೃತ ಮಹಿಳೆ ಅರುಣಾಬೆನ್ ಮತ್ತು ಸಾಂದರ್ಭಿಕ ಚಿತ್ರ

ಗಾಂಧಿನಗರ, ಅ. 22: ಗರ್ಭಿಣಿ ಪತ್ನಿಗೆ ಯೂರಿಯಾ ಕುಡಿಸಿ ಕೊಂದ ಪತಿ, ಬಳಿಕ ಆತ್ಮಹತ್ಯೆ ಎಂದು ಬಿಂಬಿಸುವ ಸಲುವಾಗಿ ಆಕೆಯ ಮೃತದೇಹವನ್ನು ನೇಣು ಹಾಕಿದ್ದಾನೆ. ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ (crime news). ಪ್ರಕರಣಕ್ಕೆ ಸಂಬಂಧಿಸಿದಂತೆ ಮಹುಧಾ ಪೊಲೀಸರು ಆಕೆಯ ಪತಿ ಮಿಥುಲ್ ಸೋಧಾ ಮತ್ತು ಆತನ ಸಹೋದರ ವಿಪುಲ್ ಸೋಧಾ ಅವರನ್ನು ಬಂಧಿಸಿದ್ದಾರೆ. ಅರುಣಾಬೆನ್ ಮೃತ ಮಹಿಳೆ.

ಆರಂಭದಲ್ಲಿ ಅರುಣಾಬೆನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಪೊಲೀಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅವರ ಸಾವು ನೇಣು ಬಿಗಿದುಕೊಂಡಿದ್ದರಿಂದ ಸಂಭವಿಸಿಲ್ಲ, ಬದಲಾಗಿ ವಿಷಕಾರಿ ವಸ್ತು ಸೇವಿಸಿದ್ದರಿಂದ ಸಂಭವಿಸಿದೆ ಎಂದು ತಿಳಿದುಬಂತು.

ಅರುಣಾಬೆನ್ ಅವರ ವ್ಯಕ್ತಿತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಿಥುಲ್ ಸೋಧಾ, ತಾಯಿ ಕೈಲಾಶ್‌ಬೆನ್‌, ಸಹೋದರ ವಿಪುಲ್ ಸೋಧಾ ಮತ್ತು ಸಹೋದರಿ ಅಲ್ಪಾಬೆನ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮೃತರ ಸಹೋದರ ವೀರೇಂದ್ರಸಿಂಹ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ: ವಾಟ್ಸ್‌ಆ್ಯಪ್‌ ಚಾಟ್‌ ಮೂಲಕ ಪತ್ನಿಯ ಕೊಲೆ ಸಂಚು ಬಯಲು

ಅರುಣಾಬೆನ್ ಮತ್ತು ಅವರ ಪತಿ ನಡುವೆ ವೈವಾಹಿಕ ಸಂಬಂಧದಲ್ಲಿ ನಂಬಿಕೆ ದ್ರೋಹ ನಡೆದಿದೆ ಎಂಬ ಅನುಮಾನ ಹಾಗೂ ಪರಸ್ಪರರ ಇತರ ಸಂಬಂಧಗಳ ಬಗ್ಗೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದವು. ಈ ವಿಷಯಗಳಿಗಾಗಿ ಅವರಿಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ಘಟನೆ ನಡೆದ ರಾತ್ರಿ ಅರುಣಾಬೆನ್ ಮತ್ತು ಮಿಥುಲ್ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಪತಿಯ ಜವಾಬ್ದಾರಿ ಏನು ಎಂಬುದರ ಕುರಿತು ಮಿಥುಲ್ ಆನ್‌ಲೈನ್‌ನಲ್ಲಿ ಮಾಹಿತಿ ಹುಡುಕಿದ್ದ ಎಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಮಿಥುಲ್ ಅರುಣಾಬೆನ್‌ ಬಾಯಿಗೆ ಬಲವಂತವಾಗಿ ಕೃಷಿ ಉತ್ಪನ್ನ ದ್ರವರೂಪದ ನ್ಯಾನೋ ಯೂರಿಯಾವನ್ನು ಸುರಿದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಾಥಮಿಕ ತನಿಖೆ ಕುಟುಂಬದ ಇತರ ಸದಸ್ಯರು ಭಾಗಿಯಾಗಿರುವ ಸಾಧ್ಯತೆ ಇದೆ. ಘಟನೆಯ ಸಮಯದಲ್ಲಿ ಅರುಣಾಬೆನ್ ಅವರ ಕಾಲುಗಳನ್ನು ಆರೋಪಿ ಅಲ್ಪಾಬೆನ್ ಹಿಡಿದಿದ್ದರೆ, ಕೈಲಾಶ್‌ಬೆನ್‌ ಕೈಗಳನ್ನು ಹಿಡಿದಿದ್ದರು. ಈ ವೇಳೆ ಮಿಥುಲ್ ಬಲವಂತವಾಗಿ ವಿಷ ಕುಡಿಸಿದ್ದಾನೆ. ಅರುಣಾಬೆನ್ ಸಾವಿನ ನಂತರ, ಆರೋಪಿಗಳು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಮೃತದೇಹವನ್ನು ಮನೆಯ ಹಿಂಭಾಗದ ಕೋಣೆಯ ಕಿಟಕಿಯ ಬಳಿ ನೈಲಾನ್ ಹಗ್ಗದಿಂದ ನೇತು ಹಾಕಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಪೊಲೀಸರು ಬರುವ ಮುನ್ನವೇ ಶವವನ್ನು ಕೆಳಕ್ಕೆ ಇಳಿಸಲಾಗಿತ್ತು.

ತನಿಖೆಯ ಭಾಗವಾಗಿ ಪೊಲೀಸರು ಘಟನಾ ಸ್ಥಳದಿಂದ ನೈಲಾನ್ ಹಗ್ಗ, ಮೊಬೈಲ್ ಫೋನ್, ಬ್ಲೇಡ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ, ಪ್ರಕರಣ ಸಂಬಂಧ ಪತಿ ಹಾಗೂ ಆತನ ಸೋದರನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.