Actress Manjula: ಕಿರುತೆರೆ ನಟಿ ಮಂಜುಳಾಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಗಂಡ
Actress Manjula: ಶುಕ್ರವಾರ, ಮಕ್ಕಳ ಕಾಲೇಜಿಗೆ ಹೋದ ನಂತರ, ಗಂಡ ಅಮರೇಶ್ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ. ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು, ತಲೆ ಕೂದಲು ಹಿಡಿದು ಗೋಡೆಗೆ ಗುದ್ದಿಸಿ, ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.

ನಟಿ ಮಂಜುಳಾ ಅಲಿಯಾಸ್ ಶ್ರುತಿ

ಬೆಂಗಳೂರು: ಕನ್ನಡದ ಕಿರುತೆರೆ ನಟಿ (Kannada Small screen actress) ಹಾಗೂ ನಿರೂಪಕಿಗೆ ಗಂಡನೇ (Husband) ಚಾಕು ಇರಿದು ಕೊಲೆಗೈಯಲು ಯತ್ನಿಸಿರುವ ಘಟನೆ ಬೆಂಗಳೂರಿನ (Bengaluru crime news) ಹನುಮಂತನಗರದಲ್ಲಿ ನಡೆದಿದೆ. ಕಿರುತೆರೆ ನಟಿ ಮಂಜುಳಾ (Actress Manjula) ಅಲಿಯಾಸ್ ಶ್ರುತಿ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಮಂಜುಳಾ ಖಾಸಗಿ ವಾಹಿನಿ ನಿರೂಪಕಿಯಾಗಿಯೂ ಕೆಲಸ ಮಾಡಿದ್ದರು. ಶ್ರುತಿಯ ಗಂಡ ಅಮರೇಶ್ ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ.
ಸಂಸಾರ ಹಾಗೂ ಹಣಕಾಸಿನ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದೆ ಎನ್ನಲಾಗುತ್ತಿದೆ. ನಟಿ ಶ್ರುತಿ ಖಾಸಗಿ ವಾಹಿನಿಯ ನಿರೂಪಕಿಯಾಗಿದ್ದು, ಇದಕ್ಕೂ ಮುನ್ನ ಹಲವಾರು ಸೀರಿಯಲ್‌ಗಳಲ್ಲಿ ನಟಿಸಿದ್ದರು. ಘಟನೆ ಜುಲೈ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಂಜುಳಾ ಮತ್ತು ಅಮರೇಶ್ 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಕುಟುಂಬ ಸಮೇತ ನಟಿ ಮಂಜುಳಾ, ಕೆಲವು ವರ್ಷಗಳಿಂದ ಹನುಮಂತನಗರದಲ್ಲಿ ಮನೆ ಲೀಸ್‌ಗೆ ಪಡೆದು ವಾಸವಿದ್ದರು. ನಟಿ ಶ್ರುತಿಯ ನಡವಳಿಕೆ ಗಂಡನಿಗೆ ಇಷ್ಟವಾಗುತ್ತಿರಲಿಲ್ಲ. ಇಬ್ಬರ ನಡುವೆ ಹೊಂದಾಣಿಕೆ ಕೊರತೆ ಇದ್ದು, ಗಂಡ- ಹೆಂಡತಿ ಆಗಾಗ ಜಗಳವಾಡುತ್ತಿದ್ದರು.
ಕೆಲ ದಿನಗಳಿಂದ ನಟಿ ಶ್ರುತಿ ಗಂಡನನ್ನು ಬಿಟ್ಟು ಅಣ್ಣನ ಮನೆಯಲ್ಲಿದ್ದರು. ಕಳೆದ ಏಪ್ರಿಲ್‌ನಿಂದ ಗಂಡನಿಂದ ದೂರವಾಗಿದ್ದರು. ಇಬ್ಬರ ನಡುವೆ ಮನೆ ಲೀಸ್ ಹಣಕ್ಕಾಗಿ ಜಗಳ ನಡೆದಿತ್ತು. ಈ ಸಂಬಂಧ ಶ್ರುತಿ ಹನುಮಂತ ನಗರ ಠಾಣೆಗೆ ದೂರು ಸಹ ನೀಡಿದ್ದರು. ಕಳೆದ ಗುರುವಾರವಷ್ಟೇ ರಾಜಿ ಸಂಧಾನ ಮಾಡಿಕೊಂಡು ಗಂಡನ ಜೊತೆಗೆ ಒಂದಾಗಿದ್ದರು.
ಶುಕ್ರವಾರ, ಮಕ್ಕಳ ಕಾಲೇಜಿಗೆ ಹೋದ ನಂತರ, ಗಂಡ ಅಮರೇಶ್ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದಾನೆ. ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು, ತಲೆ ಕೂದಲು ಹಿಡಿದು ಗೋಡೆಗೆ ಗುದ್ದಿಸಿ, ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಸಾರ ಮತ್ತು ಹಣಕಾಸು ವಿಚಾರಕ್ಕೆ ಕೊಲೆ ಯತ್ನ ಮಾಡಿರುವುದಾಗಿ ಶ್ರುತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಆರೋಪಿ ಅಮರೇಶ್‌ನನ್ನು ಬಂಧಿಸಲಾಗಿದೆ. ಗಾಯಾಳು ಮಂಜುಳಾ @ ಶೃತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ: ಕೋರ್ಟ್‌ಗೆ ದರ್ಶನ್ ಹಾಜರು, ವಿಚಾರಣೆ ಆ.12ಕ್ಕೆ ಮುಂದೂಡಿಕೆ