ಪಾಟ್ನಾ: ಶೌಚಾಲಯವೊಂದರಲ್ಲಿ (Toilet) 10 ವರ್ಷ ವಯಸ್ಸಿನ 5ನೇ ತರಗತಿ ವಿದ್ಯಾರ್ಥಿನಿ (Student) ಜೋಯಾ ಪರ್ವೀನ್ ಸಜೀವ ದಹನಗೊಂಡು ಮೃತಪಟ್ಟ ಘಟನೆಯು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಆಗಸ್ಟ್ 27 ರಂದು ಪಾಟ್ನಾದ (Patna) ಗಾರ್ಡನಿಬಾಗ್‌ನ ಆಮ್ಲಾ ಟೋಲಾ ಕನ್ಯಾ ವಿದ್ಯಾಲಯದಲ್ಲಿ ಘಟನೆ ನಡೆದಿದ್ದು, ಇದರಿಂದ ಕೋಪಗೊಂಡ ಕುಟುಂಬ ಮತ್ತು ಸ್ಥಳೀಯರು ಚಿತ್ಕೊಹ್ರಾ ಗೋಲಾಂಬರ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಘರ್ಷಣೆ, ಕಲ್ಲು ತೂರಾಟ ನಡೆದು ಹವಾಲ್ದಾರ್ ರಂಜಿತ್ ಕುಮಾರ್ ಗಾಯಗೊಂಡಿದ್ದಾರೆ.
ಇನ್ನೂ ಘಟನಾ ಸ್ಥಳದಲ್ಲಿ ಅರ್ಧ ಲೀಟರ್ ಸೀಮೆಎಣ್ಣೆ ತುಂಬಿದ ಬಾಟಲ್ ಪತ್ತೆಯಾಗಿದೆ. ಜೋಯಾಳ ತಾಯಿ, “ಶಾಲಾ ಸಿಬ್ಬಂದಿಯೇ ನನ್ನ ಮಗಳನ್ನು ಸುಟ್ಟು ಕೊಂದಿದ್ದಾರೆ. ಜೋಯಾ, ಈ ಹಿಂದೆ ಶಿಕ್ಷಕರು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದರು” ಎಂದು ಸ್ಥಳೀಯ ಪತ್ರಕರ್ತರಿಗೆ ತಿಳಿಸಿದ್ದಾರೆ. ಜೋಯಾಳ ಸಹೋದರಿ ನರ್ಗಿಸ್, “ಒಂದು ವಾರದ ಹಿಂದೆ ಜೋಯಾ, ಒಬ್ಬ ಶಿಕ್ಷಕ (ಅನಿಲ್ ಸರ್) ವಿದ್ಯಾರ್ಥಿನಿಯೊಂದಿಗೆ ದುರ್ವರ್ತನೆ ನಡೆಸಿದ್ದನ್ನು ಕಂಡಿದ್ದಾಗಿ ಹೇಳಿದ್ದಳು. ಈ ಬಗ್ಗೆ ಮಾತನಾಡಿದರೆ ಶಾಲೆಯಿಂದ ಉಚ್ಛಾಟನೆ ಮಾಡುವುದಾಗಿ ಬೆದರಿಕೆ ಹಾಕಿದ್ದರು” ಎಂದು ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಜೋಯಾಳನ್ನು ಶೌಚಾಲಯದಿಂದ ರಕ್ಷಿಸಿದಾಗ ಆಕೆ ಇನ್ನೂ ಜೀವಂತವಾಗಿದ್ದಳು, ಆದ್ರೆ ತೀವ್ರವಾದ ಸುಟ್ಟ ಗಾಯಗಳಾಗಿದ್ದವು. ಕೂಡಲೇ ವಿದ್ಯಾರ್ಥಿನಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (ಪಿಎಂಸಿಎಚ್) ಕರೆದೊಯ್ದರೂ ಬದುಕುಳಿಯಲಿಲ್ಲ. ಶಾಲಾ ಸಿಬ್ಬಂದಿ, ಜೋಯಾ ನೀರಿನ ಬಾಟಲಿಯಲ್ಲಿ ಸೀಮೆಎಣ್ಣೆ ತಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. ಆದರೆ, ಕುಟುಂಬವು ಇದನ್ನು ತಳ್ಳಿಹಾಕಿ, ಶಾಲೆಯಲ್ಲೇ ಕಿರುಕುಳ ನೀಡಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದೆ.
ಈ ಸುದ್ದಿಯನ್ನು ಓದಿ: Viral News: ಎಲಾನ್ ಮಸ್ಕ್ ಜೊತೆ ಬೆಂಗಳೂರು ಮೂಲದ ಉದ್ಯಮಿಯ ಸೆಲ್ಫಿ-ಈ ಫೋಟೋದ ಅಸಲಿಯತ್ತೇನು?
ಇತ್ತ ಪೊಲೀಸರು ಆತ್ಮಹತ್ಯೆ ಮತ್ತು ಕೊಲೆ ಎಂಬ ಎರಡು ಸಾಧ್ಯತೆಗಳನ್ನೂ ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ಜೋಯಾಳ ತಂದೆಯ ದೂರಿನ ಆಧಾರದ ಮೇಲೆ ಅಪರಿಚಿತರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇನ್ನೂ ಶಿಕ್ಷಕರ ಕಿರುಕುಳದ ಆರೋಪದ ಬಗ್ಗೆ ಕೂಡ ತನಿಖೆ ಮಾಡುತ್ತಿದ್ದೇವೆ. ಆದ್ರೆ ಇನ್ನೂ ಯಾವುದೇ ಬಂಧನವಾಗಿಲ್ಲ” ಎಂದು ಕೇಂದ್ರ ಎಸ್‌ಪಿ ದಿಕ್ಷಾ ತಿಳಿಸಿದ್ದಾರೆ. ಈ ದುರ್ಘಟನೆ ಪಾಟ್ನಾದಲ್ಲಿ ಆಘಾತವನ್ನುಂಟು ಮಾಡಿದ್ದು, ಸ್ಥಳೀಯರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.