ವಾಷಿಂಗ್ಟನ್, ಅ.23: ಅಮೆರಿಕದ (America) ಕ್ಯಾಲಿಫೋರ್ನಿಯಾದಲ್ಲಿ ಪತ್ನಿಯನ್ನು ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ಫೋರ್ಸ್ಮೆಂಟ್ ಅಧಿಕಾರಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದ ಭಾರತೀಯ ಮೂಲದ 28 ವರ್ಷದ ವ್ಯಕ್ತಿಯೊಬ್ಬನನ್ನು ಇದೀಗ ಪತ್ನಿಯ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಭಾರತ ಮೂಲದ 30 ವರ್ಷದ ಜಾಸ್ಮಿನ್ ಗಿಲ್ ಕೊಲೆಯಾದ ಮಹಿಳೆ. ಅವರು ಸೆಪ್ಟೆಂಬರ್ 30ರಂದು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಅವರು ನಾಪತ್ತೆಯಾಗಿದ್ದರು.
ಜಾಸ್ಮಿನ್ ನಾಪತ್ತೆಯಾದ ನಾಲ್ಕು ದಿನಗಳ ನಂತರ ಅವರ ಸೋದರ ಸಂಬಂಧಿಯೊಬ್ಬರು ಈ ಕುರಿತು ದೂರು ದಾಖಲಿಸಿದ್ದರು. ಆರಂಭಿಕ ತನಿಖೆಯ ವೇಳೆ, ಜಾಸ್ಮಿನ್ ಅವರ ಪತಿ ಗುರಿಂದರ್ ಗಿಲ್, ತಮ್ಮ ನಿವಾಸದಲ್ಲಿ ಪತ್ನಿಯನ್ನು ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ICE) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿಕೊಂಡಿದ್ದ. ಅಮೆರಿಕದ ಈ ಸಂಸ್ಥೆಯು ವಲಸೆ ನಿಯಮಗಳ ಉಲ್ಲಂಘನೆಯ ಶಂಕೆಯ ಮೇರೆಗೆ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯುವ ಅಧಿಕಾರ ಹೊಂದಿದೆ.
ಬಳಿಕ ತನಿಖಾಧಿಕಾರಿಗಳು ಐಸಿಇ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಜಾಸ್ಮಿನ್ ಅವರ ನಿವಾಸದಲ್ಲಿ ಯಾವುದೇ ಕಾರ್ಯಾಚರಣೆ ನಡೆಸಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿತು. ತನಿಖೆ ಮುಂದುವರಿದಂತೆ, ಪತ್ನಿಯ ನಾಪತ್ತೆಯ ಕುರಿತು ಗುರಿಂದರ್ ನೀಡಿದ ಹೇಳಿಕೆಗಳಲ್ಲಿ ಹಲವು ವ್ಯತ್ಯಾಸಗಳಿರುವುದನ್ನು ತನಿಖಾಧಿಕಾರಿಗಳು ಗುರುತಿಸಿದರು. ಜಾಸ್ಮಿನ್ ಮತ್ತು ಗುರಿಂದರ್ ನಡುವೆ ವಿಚ್ಛೇದನ ಹಾಗೂ ಮಕ್ಕಳ ಕಸ್ಟಡಿ ಪಡೆಯುವ ವಿಚಾರವಾಗಿ ವಿವಾದ ನಡೆಯುತ್ತಿತ್ತು ಎಂಬುದು ತನಿಖಾಧಿಕಾರಿಗಳಿಗೆ ತಿಳಿದುಬಂತು ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ಇನ್ನು, ಅಕ್ಟೋಬರ್ 1ರಂದು ಎಲ್ ಡೊರಾಡೊ ಕೌಂಟಿಯಲ್ಲಿ ಸುಟ್ಟುಹೋದ ಮಾನವ ದೇಹದ ಅವಶೇಷಗಳು ಪತ್ತೆಯಾಗಿದ್ದವು. ಬಳಿಕ ಆ ಅವಶೇಷಗಳು ಜಾಸ್ಮಿನ್ ಅವರದ್ದೇ ಎಂದು ದೃಢಪಟ್ಟಿತು. ತನಿಖೆಯ ಆಧಾರದ ಮೇಲೆ, ಜಾಸ್ಮಿನ್ ಅವರ ಕೊಲೆ ಆರೋಪದಡಿ ಗುರಿಂದರ್ ಗಿಲ್ ವಿರುದ್ಧ ಬಂಧನ ವಾರಂಟ್ ಪಡೆದ ತನಿಖಾಧಿಕಾರಿಗಳು, ಅಕ್ಟೋಬರ್ 14ರಂದು ಅವರನ್ನು ಬಂಧಿಸಿದರು.
ಆರೋಪಿಯಾಗಿರುವ ಗುರಿಂದರ್ ಗಿಲ್ನನ್ನು ಸದ್ಯ ಸ್ಯಾಕ್ರಮೆಂಟೊ ಕೌಂಟಿಯ ಮುಖ್ಯ ಜೈಲಿನಲ್ಲಿ ಇರಿಸಲಾಗಿದೆ. ಆತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ಐಸಿಇ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭಾರತದಲ್ಲಿರುವ ಜಾಸ್ಮಿನ್ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಪುತ್ರಿಯನ್ನು ಕಳೆದುಕೊಂಡ ಕುಟುಂಬವು ತೀವ್ರ ದುಃಖ ವ್ಯಕ್ತಪಡಿಸಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾಳೆ, ಅವಳಿಗಿನ್ನೂ ಜೀವನ ನೋಡಲು ತುಂಬಾ ಇತ್ತು ಎಂದು ಕುಟುಂಬ ಹೇಳಿದೆ. ತನ್ನ ಮಗಳು ಕ್ರೌರ್ಯಕ್ಕೆ ಬಲಿಯಾದಳು ಎಂದು ಅವರ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.