ಜೈಪುರ: ಕಳೆದ ನವೆಂಬರ್‌ನಲ್ಲಿ ಜೈಪುರ (Jaipur)ದ ನೀರ್ಜಾ ಮೋದಿ ಶಾಲೆ (Neerja Modi School) ಯ 4ನೇ ತರಗತಿ ವಿದ್ಯಾರ್ಥಿನಿ 9 ವರ್ಷದ ಅಮೇರಾ ಕಟ್ಟಡದ 4ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಸಿಸಿಟಿವಿ ದೃಶ್ಯಗಳು ಮತ್ತೆ ಜೀವ ತುಂಬಿವೆ. ದೃಶ್ಯಗಳ ಪ್ರಕಾರ, ಅಮೇರಾ ಎಂದಿನಂತೆ ಶಾಂತವಾಗಿ ತರಗತಿ ಪ್ರವೇಶಿಸಿ, ನೃತ್ಯ (Self Harming) ತರಗತಿಯಲ್ಲೂ ಉತ್ಸಾಹದಿಂದ ಪಾಲ್ಗೊಂಡಿದ್ದಳು. ಆದರೆ ನಂತರ ತರಗತಿಯಲ್ಲಿ ಕೆಲವು ಮಕ್ಕಳು ಡಿಜಿಟಲ್ ಸ್ಲೇಟ್‌ನಲ್ಲಿ ಏನನ್ನೋ ತೋರಿಸಿದ ಬಳಿಕ ಆಕೆಯ ನಡವಳಿಕೆ ಬದಲಾಗಿದೆ. ಆಕೆ ತೀವ್ರ ಮುಜುಗರ, ತಳಮಳ ಮತ್ತು ಆತಂಕಕ್ಕೆ ಒಳಗಾಗಿದ್ದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ತನ್ನ ಆತಂಕವನ್ನು ತೋಡಿಕೊಳ್ಳಲು ಅಮೇರಾ ಸುಮಾರು ಒಂದು ಗಂಟೆಯ ಅವಧಿಯಲ್ಲಿ ಹಲವು ಬಾರಿ ತರಗತಿ ಶಿಕ್ಷಕಿಯ ಬಳಿ ಹೋಗಿದ್ದಾಳೆ. ಆದರೆ ಪ್ರತಿ ಬಾರಿಯೂ ಬೇರೆ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಶಿಕ್ಷಕಿಯ ಗಮನ ಬೇರೆಡೆ ಸೆಳೆದಿದ್ದಾರೆ. ಅಮೇರಾ ಕೈ ಮುಗಿದು, ಬಾಯಿ ಮತ್ತು ತಲೆ ಮುಚ್ಚಿಕೊಂಡು ತನ್ನ ಅಸಹಾಯಕತೆಯನ್ನು ವಿವರಿಸಲು ಯತ್ನಿಸಿದರೂ, ಶಿಕ್ಷಕಿ ಆಕೆಯ ಮಾತನ್ನು ಆಲಿಸದೆ ಗದರಿಸಿ ಸೀಟಿಗೆ ಮರಳಿ ಕಳುಹಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ತರಗತಿಯ ಒಳಗೆ ಇಷ್ಟೆಲ್ಲಾ ಗೊಂದಲಗಳು ನಡೆಯುತ್ತಿದ್ದರೂ ಶಿಕ್ಷಕಿ ಮಾತ್ರ ಪರಿಸ್ಥಿತಿಯನ್ನು ತಿಳಿಗೊಳಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ.
ಇದಾದ ಕೆಲವೇ ಕ್ಷಣಗಳಲ್ಲಿ ಅಮೇರಾ ತರಗತಿಯಿಂದ ಹೊರನಡೆದು, ಶಾಲೆಯ ಯಾವುದೇ ಸಿಬ್ಬಂದಿಯ ಕಣ್ಣಿಗೆ ಬೀಳದಂತೆ ನೆಲಮಹಡಿಯಿಂದ 4ನೇ ಮಹಡಿಗೆ ವೇಗವಾಗಿ ಹೋಗಿದ್ದಾಳೆ. ಕಾರಿಡಾರ್‌ಗಳಲ್ಲಿ ಓಡುತ್ತಿದ್ದ ಆಕೆಯನ್ನು ತಡೆಯಲು ಯಾರೂ ಇರಲಿಲ್ಲ. ನವೆಂಬರ್ 1 ರಂದು ಆಕೆ ಅಲ್ಲಿಂದ ಕೆಳಗೆ ಬಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾಳೆ.
ಕಠಿಣ ಕ್ರಮಕ್ಕೆ ಕುಟುಂಬದ ಒತ್ತಾಯ:
ಮಗಳ ಸಾವಿಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಪೋಷಕರು, ಕೇವಲ ವರ್ಗ ಶಿಕ್ಷಕಿ ಮಾತ್ರವಲ್ಲದೆ ಶಾಲೆಯ ಪ್ರಾಂಶುಪಾಲರು ಮತ್ತು ಅಧ್ಯಕ್ಷರ ಮೇಲೂ ಜುವೆನೈಲ್ ಜಸ್ಟಿಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರ ನಿಷ್ಕ್ರಿಯತೆಯ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.
ಸಿಬಿಎಸ್‌ಇ ತನಿಖಾ ಸಮಿತಿಯು ಶಾಲೆಗೆ ಶೋಕಾಸ್ ನೋಟಿಸ್ ನೀಡಿದ್ದು, ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಶಾಲೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದೆ. ಕಳೆದ 18 ತಿಂಗಳುಗಳಿಂದ ಅಮೇರಾ ಶಾಲೆಯಲ್ಲಿ ನಿರಂತರವಾಗಿ ಸಹಪಾಠಿಗಳಿಂದ ಕಿರುಕುಳಕ್ಕೊಳಗಾಗಿದ್ದಳು. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ತಂದೆಯು ದೂರು ನೀಡಿದ್ದರೂ, ಶಿಕ್ಷಕಿ ಪುನೀತಾ ಶರ್ಮಾ ಅದನ್ನು ನಿರ್ಲಕ್ಷಿಸಿ "ಇತರ ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ" ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶಾಲೆಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಆಲ್-ರೌಂಡರ್ ಹಾಗೂ ಅತ್ಯಂತ ಪ್ರತಿಭಾವಂತ ಬಾಲಕಿಯೊಬ್ಬಳು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಬಲಿಯಾಗಿರುವುದು ಇಡೀ ದೇಶದಲ್ಲೇ ತೀವ್ರ ಆಘಾತ ಮೂಡಿಸಿದೆ.