ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ 63 ವರ್ಷದ ಉದ್ಯಮಿ ವಿನೀತ್ ಮಿನೋಚಾ (Vineet Minocha) ಅವರ ಭೀಕರ ಹತ್ಯೆ (Brutal Murder) ಪ್ರಕರಣದಲ್ಲಿ ಸೊಸೆಯೇ (Daughter-in-law) ಪ್ರಮುಖ ಆರೋಪಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಾವನನ್ನು ಹತ್ಯೆ ಮಾಡಲು ಮಾಜಿ ಮನೆ ಕೆಲಸಗಾರನಿಗೆ ₹6 ಲಕ್ಷದ ಸುಪಾರಿ ನೀಡಿದ್ದಳು ಎಂದು ಪೊಲೀಸರು (Police) ಆರೋಪಿಸಿದ್ದಾರೆ.
ಘಟನೆ ನಡೆದ ರಾತ್ರಿ ವಿನೀತ್ ಮಿನೋಚಾ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಅವರ ಸೊಸೆ ಶಾಲು ಮಿನೋಚಾ ಸ್ನೇಹಿತರೊಂದಿಗೆ ಕಾಸ್ಮೋಜಿನ್ ಲೌಂಜ್‌ನಲ್ಲಿ ಪಾರ್ಟಿ ಮಾಡುತ್ತಿದ್ದಳು. ಅಲ್ಲಿ ‘ತುಮ್ ತೋ ಧೋಖೇಬಾಜ್ ಹೋ’ ಹಾಡಿಗೆ ಆಕೆ ನೃತ್ಯ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶಾಲು ಪಾರ್ಟಿಯಲ್ಲಿದ್ದರೂ ಮನೆಯಲ್ಲಿನ ಹತ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಳು. ಮೊಬೈಲ್ ಕರೆ ಮೂಲಕ ಹಂತಕರೊಂದಿಗೆ ಸಂಪರ್ಕದಲ್ಲಿದ್ದು, ಹತ್ಯೆ ನಡೆಯುವ ವೇಳೆ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಳು ಎನ್ನಲಾಗಿದೆ. ತನ್ನ ಮೇಲಿನ ಅನುಮಾನ ಬಾರದಂತೆ ಪಾರ್ಟಿಗೆ ತೆರಳಿರುವುದು ಪೂರ್ವಯೋಜಿತ ತಂತ್ರವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಪ್ರಕರಣದಲ್ಲಿ ಕುಟುಂಬದ ಮಾಜಿ ಉದ್ಯೋಗಿ ವಿಶಾಲ್ ಹಾಗೂ ಆತನ ಸಹಚರ ರಾಜ್ ಕಿಶೋರ್ ಅವರನ್ನು ಪೊಲೀಸರು ಮೊದಲು ಬಂಧಿಸಿದ್ದರು. ವಿಚಾರಣೆ ವೇಳೆ ವಿಶಾಲ್, ಶಾಲು ₹6 ಲಕ್ಷಕ್ಕೆ ಹತ್ಯೆಗೆ ಒಪ್ಪಂದ ಮಾಡಿಕೊಂಡಿದ್ದಳು ಎಂದು ಹೇಳಿದ್ದಾನೆ ಎನ್ನಲಾಗಿದೆ.
ಪೊಲೀಸರ ವಿಚಾರಣೆಯಲ್ಲಿ ಶಾಲು ತನ್ನ ಮಾವನ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದ ವಿಚಾರವೂ ಬೆಳಕಿಗೆ ಬಂದಿದೆ. ತಡರಾತ್ರಿವರೆಗೆ ಪಾರ್ಟಿ ಮಾಡಲು ಅವಕಾಶ ನೀಡದಿರುವುದು, ಮನೆಯೊಳಗಿನ ಚಟುವಟಿಕೆಗಳನ್ನು ಸಿಸಿಟಿವಿ ಮೂಲಕ ನಿಗಾ ವಹಿಸುವುದು ಹಾಗೂ ಸಣ್ಣ ಖರ್ಚಿಗೂ ಮಾವನ ಬಳಿ ಹಣ ಕೇಳಬೇಕಾಗುತ್ತಿತ್ತು ಎಂಬ ಕಾರಣಗಳಿಂದ ಆಕೆ ಅಸಮಾಧಾನಗೊಂಡಿದ್ದಳು ಎನ್ನಲಾಗಿದೆ.
ಜುಲೈ 28ರಂದು ತಡವಾಗಿ ಮನೆಗೆ ಬಂದಿದ್ದ ಶಾಲು ಮತ್ತು ಮಾವನ ನಡುವೆ ವಾಗ್ವಾದ ನಡೆದಿತ್ತು. ಇದಾದ ಬಳಿಕ ಹತ್ಯೆಯ ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಶಾಲ್‌ಗೆ ಮುಂಗಡವಾಗಿ ₹2 ಲಕ್ಷ ನೀಡಲಾಗಿದ್ದು, ಉಳಿದ ₹4 ಲಕ್ಷವನ್ನು 15 ದಿನಗಳ ಬಳಿಕ ನೀಡುವುದಾಗಿ ಭರವಸೆ ನೀಡಿದ್ದಳು ಎನ್ನಲಾಗಿದೆ. ಅಲ್ಲದೆ ಮನೆಯ ಡುಪ್ಲಿಕೇಟ್ ಕೀಯನ್ನೂ ಆತನಿಗೆ ನೀಡಿದ್ದಳು.
ಶುಕ್ರವಾರ ವಿಶಾಲ್‌ನನ್ನು ಮನೆಗೆ ಕರೆಸಿ ಹತ್ಯೆಯ ಯೋಜನೆಯನ್ನು ಅಂತಿಮಗೊಳಿಸಿದ್ದಳು. ಮರುದಿನ ಶನಿವಾರ ಶಾಲು ತನ್ನ ಪತಿ ಹಾಗೂ ಮಗುವಿನೊಂದಿಗೆ ಪಾರ್ಟಿಗೆ ತೆರಳಿದ ಬಳಿಕ ವಿಶಾಲ್ ಮತ್ತು ರಾಜ್ ಕಿಶೋರ್ ಮನೆಗೆ ಬಂದಿದ್ದರು. ಔಷಧಿ ತಲುಪಿಸಲು ಬಂದಿದ್ದಾರೆ ಎಂದು ಭದ್ರತಾ ಸಿಬ್ಬಂದಿಗೆ ತಿಳಿಸಿ ಅವರು ಮನೆಯೊಳಗೆ ಪ್ರವೇಶಿಸಿದ್ದರು ಎನ್ನಲಾಗಿದೆ.
ವಿನೀತ್ ಅವರನ್ನು ಉಸಿರುಗಟ್ಟಿಸಿ ಕೊಂದು ಹೃದಯಾಘಾತದಂತೆ ಬಿಂಬಿಸುವುದು ಆರೋಪಿಗಳ ಆರಂಭಿಕ ಯೋಜನೆಯಾಗಿತ್ತು. ಆದರೆ ಪರಿಸ್ಥಿತಿ ಕೈಮೀರಿ, ಚಾಕುವಿನಿಂದ 26 ಬಾರಿ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲು ಮತ್ತು ಆಕೆಯ ಪತಿ ರಾತ್ರಿ ಸುಮಾರು 3 ಗಂಟೆಗೆ ಮನೆಗೆ ಮರಳಿದಾಗ ವಿನೀತ್ ಮಿನೋಚಾ ಮಲಗುವ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದರು.
ಪ್ರಕರಣದಲ್ಲಿ ಪಾರ್ಟಿಯ ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆಗಳ ವಿವರಗಳು ಹಾಗೂ ಆರೋಪಿಗಳ ನಡುವಿನ ಸಂಭಾಷಣೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಹತ್ಯೆಯ ಸಮಯದ ಸಂಪೂರ್ಣ ಟೈಮ್‌ಲೈನ್ ಅನ್ನು ದೃಢಪಡಿಸುವ ಕಾರ್ಯ ಮುಂದುವರಿದಿದೆ.