ಕೇರಳ: ಮದುವೆಯಾಗುವ ಭರವಸೆ ನೀಡಿ ನಡೆಸಿರುವ ಸಮ್ಮತಿಯ ಲೈಂಗಿಕತೆ (consensual Physical relationship) ಬಳಿಕ ಅವರಿಬ್ಬರೂ ಬೇರ್ಪಟ್ಟರೆ ಅದನ್ನು ಅತ್ಯಾಚಾರ (Rape case) ಎಂದು ಪರಿಗಣಿಸುವುದು ತರ್ಕಬದ್ಧವಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಹೇಳಿದೆ. ರ‍್ಯಾಪರ್ ವೇದನ್ (Rapper Vedan's Case) ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು, ಸಮ್ಮತಿಯ ಲೈಂಗಿಕತೆಯನ್ನು ವಿಘಟನೆಯ ಅನಂತರ ಅತ್ಯಾಚಾರ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಹೇಳಿ ಮಲಯಾಳಂ ರ‍್ಯಾಪರ್ ಹಿರಣ್ ದಾಸ್ ಮುರಳಿ (Malayalam rapper Hiran Das Murali) ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.
ಮದುವೆಯ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾನೆ ಎನ್ನುವ ಆರೋಪದ ಕುರಿತು ವಿಚಾರಣೆ ನಡೆಸುತ್ತಿರುವ ಕೇರಳ ಹೈಕೋರ್ಟ್ ಮಲಯಾಳಂ ರ‍್ಯಾಪರ್ ಹಿರಣ್ ದಾಸ್ ಮುರಳಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪರಸ್ಪರ ಒಪ್ಪಿಗೆಯ ಲೈಂಗಿಕತೆಯನ್ನು ಅತ್ಯಾಚಾರ ಎಂದು ಪರಿಗಣಿಸುವುದು ತರ್ಕಬದ್ಧವಲ್ಲ ಮತ್ತು ಕಠಿಣ ಎಂದು ನ್ಯಾಯಾಲಯ ಹೇಳಿದೆ.
ಮಹಿಳಾ ವೈದ್ಯೆಯೊಬ್ಬರು ದಾಖಲಿಸಿರುವ ಈ ಪ್ರಕರಣದಲ್ಲಿ 2021 ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ರ‍್ಯಾಪರ್ ವೇದನ್ ತನ್ನೊಂದಿಗೆ ಸ್ನೇಹ ಬೆಳೆಸಿದ್ದರು. ಕಾಲಾನಂತರದಲ್ಲಿ ನಮ್ಮ ಸಂಬಂಧ ಬೆಳೆಯಿತು. ಅವರು ತಮ್ಮನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದು, ಬಳಿಕ 2021 ಮತ್ತು 2023 ರ ನಡುವೆ ಕೋಝಿಕ್ಕೋಡ್, ಕೊಚ್ಚಿ ಮತ್ತು ಇತರ ಸ್ಥಳಗಳಲ್ಲಿ ಹಲವಾರು ಬಾರಿ ದೈಹಿಕ ಸಂಬಂಧ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಇದರ ಮಾನಸಿಕ ಆಘಾತದಿಂದ ಚೇತರಿಸಿಕೊಳ್ಳಲು ಕಳೆದ ಎರಡು ವರ್ಷಗಳಿಂದ ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್, ಅತ್ಯಾಚಾರದ ಅನಂತರ ಮುಂದಿನ ಮೂರು ದಿನಗಳವರೆಗೆ ವೇದನ್ ವೈದ್ಯರೊಂದಿಗೆ ವಾಸಿಸುತ್ತಿದ್ದರು ಮತ್ತು ಹಲವಾರು ಸಂದರ್ಭಗಳಲ್ಲಿ ಅವರನ್ನು ಭೇಟಿ ಮಾಡಿದ್ದರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಮೊದಲ ದಿನವೇ ಅತ್ಯಾಚಾರವಾಗಿದ್ದರೆ ಮುಂದಿನ ಮೂರು ದಿನಗಳವರೆಗೆ ಅಥವಾ ಅನಂತರವೂ ಆತನ ಭೇಟಿಗೆ, ಆತನೊಂದಿಗೆ ಇರಲು, ತನ್ನೊಂದಿಗೆ ದೈಹಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ಹೇಗೆ ಅವಕಾಶ ನೀಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ. ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಗೊಂದಲಮಯ ಮತ್ತು ಕಷ್ಟಕರವಾಗಿದೆ. ಇದು ಅತ್ಯಾಚಾರವಲ್ಲ. ಒಪ್ಪಿಗೆಯ ಸಂಬಂಧವನ್ನು ಸೂಚಿಸುತ್ತವೆ ಎಂದು ಅವರು ತಿಳಿಸಿದ್ದಾರೆ.
ಮದುವೆಯ ಸುಳ್ಳು ಭರವಸೆಯ ಮೇಲೆ ಲೈಂಗಿಕ ಸಂಭೋಗಕ್ಕೆ ಒಪ್ಪಿಗೆ ಮತ್ತು ಮದುವೆಯ ನಿರೀಕ್ಷೆ ಅಥವಾ ಊಹೆಯ ಮೇಲೆ ಒಪ್ಪಿಗೆ ವಿಭಿನ್ನವಾಗಿವೆ. ಸಂಬಂಧವು ಕೊನೆಗೊಂಡ ಅನಂತರ ಒಪ್ಪಿಗೆಯ ಲೈಂಗಿಕತೆಯನ್ನು ಅತ್ಯಾಚಾರ ಎಂದು ಕರೆಯುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ಮದುವೆಯಾಗುವ ಭರವಸೆಯು ಮದುವೆಯಲ್ಲಿ ಕೊನೆಗೊಳ್ಳದ ಕಾರಣ ಲೈಂಗಿಕ ಸಂಬಂಧವು ಮದುವೆಯ ಸುಳ್ಳು ಭರವಸೆಯನ್ನು ಆಧರಿಸಿದೆ ಎಂದು ಅರ್ಥವಲ್ಲ. ಸಮ್ಮತಿಯಿಂದ ಕೂಡಿದ ದಂಪತಿ ನಡುವಿನ ಸಂಬಂಧ ಮುರಿದುಹೋದರೆ ಅದು ಕ್ರಿಮಿನಲ್ ಮೊಕದ್ದಮೆ ಮತ್ತು ಬಂಧನಕ್ಕೆ ಕಾರಣವಾದರೆ ಅದು ವ್ಯಕ್ತಿಯ ಭವಿಷ್ಯವನ್ನು ನಾಶಪಡಿಸಬಹುದು ಎಂದು ನ್ಯಾಯಮೂರ್ತಿ ಥಾಮಸ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Yadgir News: ಶಾಲೆ ಶೌಚಾಲಯದಲ್ಲಿ ಮಗುವಿಗೆ ಜನ್ಮವಿತ್ತ 9ನೇ ತರಗತಿ ಬಾಲಕಿ!
ದೂರುದಾರರು ಅಭಿಮಾನಿಯಾಗಿ ಅವರನ್ನು ಸಂಪರ್ಕಿಸಿದ ಅನಂತರ ಪ್ರಾರಂಭವಾದ ಸಂಬಂಧವು ಸಮ್ಮತಿಯಿಂದ ಕೂಡಿತ್ತು. ದೂರು ವೈಯಕ್ತಿಕ ಭಿನ್ನಾಭಿಪ್ರಾಯಗಳ ಪರಿಣಾಮವಾಗಿದೆ ಎಂದು ವೇದನ್ ಪರ ವಕೀಲರು ವಾದಿಸಿದರು. ನ್ಯಾಯಾಲಯವು ಈ ಹಿಂದೆ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು ಮತ್ತು ಅವರ ಅರ್ಜಿಯ ಕುರಿತು ಅಂತಿಮ ಆದೇಶವನ್ನು ಕಾಯ್ದಿರಿಸಿತ್ತು.