ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೇರಳದ 16 ವರ್ಷದ ಬಾಲಕಿಯ ಆತ್ಮಹತ್ಯೆಯ ಹಿಂದೆಯೂ ಕೊರಿಯನ್‌ ಕರಿ ನೆರಳು; ಇನ್ನೆಷ್ಟು ಅಪ್ರಾಪ್ತರು ಬಲಿಯಾಗಬೇಕು?

Korean Link: ಕೇರಳದಲ್ಲಿ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹಿಂದೆ ಕೊರಿಯಾದ ಕರಿ ನೆರಳು ವ್ಯಾಪಿಸಿದೆ. ಆದಿತ್ಯಾ ಸಾವಿನ ಹಿಂದೆ ಅಪ್ರಾಪ್ತರನ್ನು ಗುರಿಯಾಗಿಸುವ ಅನುಮಾನಾಸ್ಪದ ಕೊರಿಯಾ ಮೂಲದ ಇನ್‌ಸ್ಟಾಗ್ರಾಮ್‌ ಅಕೌಂಟ್‌ನ ಪಾತ್ರವಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ಮೆಟಾ ಎಐ ಚಿತ್ರ ಮತ್ತು ಸಾಂದರ್ಭಿಕ ಚಿತ್ರ

ತಿರುವನಂತಪುರಂ, ಫೆ. 14: ದೂರದ ಕೊರಿಯಾ ಭಾರತದ ಹದಿಹರೆಯದವರ ಜೀವ ಹಿಂಡುತ್ತಿರುವ ಆಘಾತಕಾರಿ ಘಟನೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮೂವರು ಸಹೋದರಿಯರು ಉತ್ತರ ಕೊರಿಯಾದ ಗೇಮ್‌ನ ಪಾಶಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು (Korean Link). ಅಲ್ಲದೆ ಕೊರಿಯನ್ ಗೇಮ್‍ ವ್ಯಸನದಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್‍ನಲ್ಲಿ ನಡೆದಿದೆ. ಈ ಮಧ್ಯೆ ಕೇರಳದಲ್ಲಿ 16 ವರ್ಷದ ಬಾಲಕಿ ಮೃತಪಟ್ಟಿದ್ದು, ಇದರ ಹಿಂದೆಯೂ ಕೊರಿಯಾದ ಕರಿ ನೆರಳು ವ್ಯಾಪಿಸಿದೆ.

ಕೊಚ್ಚಿಯ ಚೊಟ್ಟಾನಿಕ್ಕರದಲ್ಲಿ 16 ವರ್ಷದ ಪ್ಲಸ್‌ ಒನ್‌ (ಪ್ರಥಮ ಪಿಯುಸಿ) ವಿದ್ಯಾರ್ಥಿನಿ ಆದಿತ್ಯಾ ಮೃತದೇಹ ಕೆಲವು ದಿನಗಳ ಹಿಂದೆ ಪತ್ತೆಯಾಗಿದ್ದು, ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಸಾವಿನ ಹಿಂದೆ ಅಪ್ರಾಪ್ತರನ್ನು ಗುರಿಯಾಗಿಸುವ ಅನುಮಾನಾಸ್ಪದ ಕೊರಿಯಾ ಮೂಲದ ಇನ್‌ಸ್ಟಾಗ್ರಾಮ್‌ ಅಕೌಂಟ್‌ನ ಪಾತ್ರವಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ಕೊರಿಯನ್‌ ಗೇಮ್‌ ಗೀಳಿಗೆ ಧಾರವಾಡದಲ್ಲಿ ಯುವಕ ಬಲಿ

ಶಾಲೆಗೆ ಹೋಗುತ್ತೇನೆಂದು ಜನವರಿ 27ರಂದು ಮನೆಯಿಂದ ತೆರಳಿದ್ದ ಆದಿತ್ಯಾ ಬಳಿಕ ನಾಪತ್ತೆಯಾಗಿದ್ದಳು. ವ್ಯಾಪಕ ಹುಡುಕಾಟದ ನಂತರ ಆಕೆಯ ಮೃತದೇಹ ಮನೆ ಪಕ್ಕದ ಕಲ್ಲಿನ ಕೋರೆಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಪಕ್ಕದಲ್ಲಿ ಡೆತ್‌ ನೋಟ್‌ ಕೂಡ ಕಂಡುಬಂದಿದ್ದು, ಅದರಲ್ಲಿ ಕೊರಿಯನ್ ಸ್ನೇಹಿತನ ಸಾವಿನಿಂದ ಉಂಟಾದ ಭಾವನಾತ್ಮಕ ಯಾತನೆಯನ್ನು ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬರೆದಿದ್ದಾಳೆ. ಅದಾಗ್ಯೂ ತನಿಖಾಧಿಕಾರಿಗಳು ಈಗ ಈ ಪ್ರಕರಣವು ವೈಯಕ್ತಿಕ ಆಘಾತವನ್ನೂ ಮೀರಿ ವಿವಿಧ ಕಡೆಗಳಿಗೆ ವಿಸ್ತರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ರಹಸ್ಯ ಆನ್‌ಲೈನ್ ನೆಟ್‌ವರ್ಕ್‌ಗಳ ಸಂಭಾವ್ಯ ಪ್ರಭಾವವನ್ನು ಪರಿಶೀಲಿಸುತ್ತಿದ್ದಾರೆ.

ಆದಿತ್ಯಾ ಪಾಲೋ ಮಾಡುತ್ತಿದ್ದ ʼಬ್ಲ್ಯಾಕ್‌ ವೆನೊಮ್‌ʼ (Black Venom) ಎನ್ನುವ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಅನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ. ಪೊಲೀಸರ ಪ್ರಕಾರ, ಈ ಖಾತೆಯು ಕೊರಿಯನ್ ಸಂಗೀತ ಬ್ಯಾಂಡ್‌ಗಳಿಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಒಳಗೊಂಡಿದೆ. ಕೊರಿಯನ್ ಪಾಪ್ ಸಂಸ್ಕೃತಿಯ ಬಗ್ಗೆ ಹದಿಹರೆಯದವರು ಹೊಂದಿರುವ ಆಕರ್ಷಣೆಯನ್ನು ಇನ್ನಷ್ಟು ತೀವ್ರಗೊಳಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಆರಂಭದಲ್ಲಿ ಈ ಅಕೌಂಟ್‌ಗೆ 30ಕ್ಕಿಂತ ಅಧಿಕ ಫಾಲೋವರ್ಸ್‌ ಇದ್ದರು. ಆದಿತ್ಯಾ ಸಾವಿನ ಬಳಿಕ ಯಾವ ಫಾಲೋವರ್ಸ್‌ ಕೂಡ ಕಂಡು ಬರುತ್ತಿಲ್ಲ. ಇದು ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ.

ಡೆತ್‌ ನೋಟ್‌ನಲ್ಲಿ ಏನಿದೆ?

ಆದಿತ್ಯಾ ಡೆತ್‌ ನೋಟ್‌ನಲ್ಲಿ, ʼʼಈ ತಿಂಗಳ ಆರಂಭದಲ್ಲಿ ಕೊರಿಯಾ ಮೂಲದ ಹುಡುಗನನ್ನು ಭೇಟಿಯಾದೆ. ಆತ 19ರಂದು ಮೃತಪಟ್ಟಿದ್ದಾನೆ. ಇದರಿಂದ ನನಗೆ ಭಾರಿ ದುಃಖವಾಗಿದೆ. ನಾನು ಆತನನ್ನು ಅಷ್ಟು ಇಷ್ಟಪಟ್ಟಿದ್ದೆ ಮತ್ತು ಮಿಸ್‌ ಮಾಡಿಕೊಳ್ತಾ ಇದ್ದೇನೆ. ಆತ ನನ್ನ ಮನೆಯವರಿಗಿಂತ ಹೆಚ್ಚು ಕಾಳಜಿ ವಹಿಸಿದ್ದ. ತನ್ನ ಕೊನೆಯ ಕ್ಷಣದಲ್ಲಿ ಆತನಿಗಾಗಿ ಅಳಬಾರದು ಮತ್ತು ಆತನಿಗಾಗಿ ಏನೂ ಮಾಡಿಕೊಳ್ಳಬಾರದು ಎಂದಿದ್ದ. ಈ ಬಗ್ಗೆ ಮಾತು ಕೂಡ ಕೊಟ್ಟಿದ್ದೆ. ಆದರೆ ಈ ಮಾತನ್ನು ಮೀರುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಳು.

ಹೊರ ಬಿತ್ತು ಬೆಚ್ಚಿ ಬೀಳಿಸುವ ಸಂಗತಿ

ತನಿಖೆ ವೇಳೆ ಪೊಲೀಸರು ಹಲವು ಬೆಚ್ಚಿ ಬೀಳಿಸುವ ವಿವರಗಳನ್ನು ಕಂಡುಕೊಂಡಿದ್ದಾರೆ. ಜತೆಗೆ ಸೈಬರ್ ಫೋರೆನ್ಸಿಕ್ ಸಂಶೋಧನೆಗಳು ಕಳವಳಕಾರಿ ಅಂಶಗಳತ್ತ ಬೆಳಕು ಚೆಲ್ಲಿವೆ. ಅನೇಕ ವಿದ್ಯಾರ್ಥಿಗಳು ನಿಯಮ ಉಲ್ಲಂಘಿಸಿ ಶಾಲೆಗೆ ಮೊಬೈಲ್ ಫೋನ್‌ ತರುತ್ತಿದ್ದಾರೆ ಮತ್ತು ಒಂದೇ ಮೊಬೈಲ್‌ನಿಂದ ಹಲವು ಇನ್‌ಸ್ಟಾಗ್ರಾಮ್ ಅಕೌಂಟ್‌ಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾದ ಫೋನ್‌ ಒಂದರಲ್ಲಿ 8 ಇನ್‌ಸ್ಟಾಗ್ರಾಮ್ ಖಾತೆಗೆ ಲಾಗಿನ್ ಆಗಿರುವುದು ಕಂಡುಬಂದಿದೆ. ಅನೇಕ ಖಾತೆಗಳನ್ನು ನಕಲಿ ಹೆಸರಿನಲ್ಲಿ ರಚಿಸಲಾಗಿದ್ದು, ಇದೇ ಕಾರಣಕ್ಕೆ ಪತ್ತೆಹಚ್ಚುವುದು ಸವಾಲಿನ ಕೆಲಸ ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

ಗಾಜಿಯಾಬಾದ್‌ ಬಾಲಕಿಯರ ಸಾವಿಗೆ ಕಾರಣವಾದ ಅಂಶವೇನು?

ʼʼಅಪ್ರಾಪ್ತರು ಅನಾಮಧೇಯ ಖಾತೆಗಳ ಮೂಲಕ ಸಂವಹನ ನಡೆಸುತ್ತಿರಬಹುದು. ಬಹುಶಃ ಕೋಡ್ ವಿನಿಮಯಗಳಲ್ಲಿ ತೊಡಗಿರಬಹುದು. ಸಂಘಟಿತ ಸೈಬರ್ ಗುಂಪುಗಳು ದಾರಿ ತಪ್ಪಿಸುವ ಅಥವಾ ಭಾವನಾತ್ಮಕವಾಗಿ ಪ್ರಚೋದನಕಾರಿ ವಿಚಾರಗಳನ್ನು ಪ್ರಸಾರ ಮಾಡುವ ಮೂಲಕ ಹದಿಹರೆಯದವರ ಮೇಲೆ ಮಾನಸಿಕವಾಗಿ ಪ್ರಭಾವ ಬೀರುತ್ತಿವೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಖಾತೆಗಳ ಪೈಕಿ ಹೆಚ್ಚಿನವು ವಿದೇಶಿ ಸರ್ವರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ.

ʼʼಮಗಳು 8ನೇ ತರಗತಿಯಿಂದಲೂ ಕೊರಿಯನ್‌ ಪಾಪ್‌ ಬ್ಯಾಂಡ್‌ ಬಿಟಿಎಸ್‌ನ ಅಭಿಮಾನಿಯಾಗಿದ್ದಳು. ಆಕೆ ಕೊರಿಯನ್‌ ಫ್ರೆಂಡ್‌ ಇರುವುದಾಗಿ ತಿಳಿಸಿದ್ದಳು. ಅದು ಬಿಟ್ಟು ಕೊರಿಯಾ ಜತೆಗೆ ಆಕೆಗೆ ಬೇರೆ ಸಂಪರ್ಕವಿರಲಿಲ್ಲʼʼ ಎಂದು ಆದಿತ್ಯಾ ತಾಯಿ ರಮ್ಯಾ ತಿಳಿಸಿದ್ದಾರೆ.

Ramesh Ballamoole

View all posts by this author