ಮುಂಬೈ, ಸೆ. 30: ಮಹಾರಾಷ್ಟ್ರದ ಪುಣೆಯ ಲೋಹಗಢ್ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ (Ketan Agarwal Murder Case) ಸಂಬಂಧಿಸಿದಂತೆ ದಿನಕ್ಕೊಂದು ಸುದ್ದಿ ಹೊರಬರುತ್ತಿದೆ. ಪ್ರಕರಣದಲ್ಲಿ ಸಲ್ಲಿಸಲಾದ 5,300 ಪುಟಗಳ ಆರೋಪಪಟ್ಟಿಯಲ್ಲಿ, ಕೊಲೆಗೂ ಮುನ್ನ ಕೇತನ್‌ನನ್ನು ಬೆಂಗಳೂರಿಗೆ ಕರೆದೊಯ್ದು ಕೈಕಾಲು ಮುರಿಯುವ ಯೋಜನೆ ಇತ್ತು ಎನ್ನುವ ಆಘಾತಕಾರಿ ಅಂಧ ಬಯಲಾಗಿದೆ. ಕೊಲೆಯ ಪೊಲೀಸ್ ತನಿಖೆಯಲ್ಲಿ ಮೂವರು ಆರೋಪಿಗಳಲ್ಲಿ ಒಬ್ಬನಾದ ರಿತೇಶ್ ಹಾಂಗೆ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತನೊಂದಿಗೆ ಈ ವಿಚಾರವನ್ನು ಚರ್ಚಿಸಿದ್ದ ಎಂದು ತಿಳಿದುಬಂದಿದೆ. ಆದರೆ, ಸ್ನೇಹಿತ ಈ ವಿಚಾರವನ್ನು ವಿರೋಧಿಸಿದ್ದ ಎಂದು ವರದಿಯಾಗಿದೆ.
25 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು 5,053 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಕೇತನ್‍ನನ್ನು ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಪುಣೆಯ ಲೋಹಗಢ್ ಕೋಟೆಯಿಂದ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ. ಪೊಲೀಸರು ರಿತೇಶ್ ಹಾಂಗೆ ಜತೆಗೆ ಇವರಿಬ್ಬರನ್ನೂ ಬಂಧಿಸಿದ್ದಾರೆ.
ಪುಣೆಯ ಕೇತನ್ ಮತ್ತು ಸಿಯಾ ಇಬ್ಬರೂ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನವೆಂಬರ್‌ನಲ್ಲಿ ಜೈಪುರದಲ್ಲಿ ವಿವಾಹವಾಗಲು ನಿರ್ಧರಿಸಲಾಗಿತ್ತು. ಆರೋಪಪಟ್ಟಿಯ ಪ್ರಕಾರ, ಇಬ್ಬರು ಪ್ರಮುಖ ಆರೋಪಿಗಳಾದ ಕೇತನ್ ಮತ್ತು ಸಿಯಾ ಆರಂಭದಲ್ಲಿ ಕೇತನ್ ಅವರ ಕೈ-ಕಾಲುಗಳನ್ನು ಮುರಿಯುವ ಯೋಜನೆ ರೂಪಿಸಿದ್ದರು. ಸ್ನೇಹಿತನ ಸ್ನೇಹಿತ ಇದನ್ನು ವಿರೋಧಿಸಿದಾಗ, ಅವರು ಅಗರ್ವಾಲ್ ಅವರನ್ನು ತಾವೇ ಕೊಲ್ಲಲು ನಿರ್ಧರಿಸಿದರು.
ಸಿಯಾ ಗೋಯಲ್ ಹುಟ್ಟುಹಬ್ಬದಂದು ಆಕೆಯ ಹೆಸರನ್ನು ಬೆನ್ನಿನ ಮೇಲೆ ಹಚ್ಚೆ ಹಾಕಿ ಸರ್‌ಪ್ರೈಸ್ ನೀಡಿದ್ದ ಕೇತನ್ ಅಗರ್ವಾಲ್
ಕೊಲೆಗೆ ಸಂಬಂಧಿಸಿದ ಚಲನಚಿತ್ರಗಳನ್ನು ಅವರು ವೀಕ್ಷಿಸಿದ್ದರು. ಕೊಲೆಯನ್ನು ಯೋಜಿಸಲು ಚಾಟ್‌ಜಿಪಿಟಿಯನ್ನೂ ಬಳಸಿದ್ದರು. ಅಷ್ಟೇ ಅಲ್ಲ, ಕೊಲೆ ಮಾಡಿದ ಬಳಿಕ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಪಾಡ್‌ಕ್ಯಾಸ್ಟ್‌ಗಳನ್ನು ಸಹ ವೀಕ್ಷಿಸಿದ್ದರು ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.
ಜೂನ್ 6ರಂದು, ವಿವಾಹ ಪೂರ್ವ ಫೋಟೊಶೂಟ್‌ಗಾಗಿ ಪ್ರಯಾಣಿಸುತ್ತಿದ್ದಾಗ ಸಿಯಾ ಗೋಯಲ್, ಕೇತನ್ ಅಗರ್ವಾಲ್ ಅವರ ಪಾಸ್‌ಪೋರ್ಟ್ ಹರಿದು ಕೆಫೆಯೊಂದರ ವಾಶ್‌ರೂಮ್‌ನಲ್ಲಿ ಎಸೆದಿದ್ದಳು. ಇದರಿಂದಾಗಿ ಪ್ರವಾಸಕ್ಕೆ ಹೋಗದಂತೆ ತಡೆಯಲಾಯಿತು. ಪಾಸ್‌ಪೋರ್ಟ್ ಹರಿದು ಹಾಕುವುದು ಆಕೆಯ ಪ್ರೇಮಿ ಚೇತನ್ ಚೌಧರಿಯ ಆಲೋಚನೆಯಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಗೋಯಲ್‌ನ ಪ್ರಿಯಕರ, ಪರಿಚಯವಿದ್ದ ಮಹಿಳೆಯ ಫೋಟೊ ಬಳಸಿ ಮಾಹಿ ಎಂಬ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸುವ ಸಲಹೆ ನೀಡಿದ್ದನು. ಆ ನಕಲಿ ಖಾತೆಯಿಂದ ಬಂದ ಸಂದೇಶಗಳ ಮೂಲಕ ಜೂನ್ 18ರಂದು ಕೇತನ್ ಅಗರ್ವಾಲ್ ಅವರನ್ನು ಲೋಹಗಢ ಕೋಟೆಗೆ ಕರೆತರಲಾಯಿತು ಎನ್ನಲಾಗಿದೆ.
ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಕೇಸ್; ಕೊಲೆಗೂ ಮುನ್ನ ಫೇಕ್ ಇನ್‌ಸ್ಟಾಗ್ರಾಮ್ ಐಡಿ ರಚಿಸಿದ್ದ ಸಿಯಾ!
ಸಿಯಾ ಗೋಯಲ್‌ಗಾಗಿ ಸರ್‌ಪ್ರೈಸ್ ಬರ್ತ್‌ಡೇ ಪಾರ್ಟಿ ಇದೆ ಎಂದು ನಂಬಿಸುವ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸಲಾಗಿತ್ತು. ಅಗರ್ವಾಲ್ ಅವರನ್ನು ಲೋಹಗಢ ಕೋಟೆಗೆ ಕರೆತರುವ ಯೋಜನೆಯ ಭಾಗವಾಗಿಯೇ ಈ ನಕಲಿ ಇನ್‌ಸ್ಟಾಗ್ರಾಂ ಖಾತೆಯನ್ನು ರಚಿಸಲಾಗಿತ್ತು. ಘಟನೆ ನಡೆದ ನಂತರ ಆ ನಕಲಿ ಇನ್‌ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಲಾಗಿದೆ.
ಇನ್ನು ಕೇತನ್ ಅವರನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಗೋಯಲ್ ಹಲವು ಜನರಿಗೆ ತಿಳಿಸಿದ್ದಳು ಎಂದು ಆರೋಪಪಟ್ಟಿಯಲ್ಲಿ ಬಹಿರಂಗಪಡಿಸಲಾಗಿದೆ.