ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amravati 2.0: ಅಮರಾವತಿ ಬಳಿಕ ಕೊಲ್ಲಾಪುರಲ್ಲೂ ಬಯಲಾಯ್ತು ಕರ್ಮಕಾಂಡ; 22 ವರ್ಷದ ಶಾಹಿದ್ ಸಮೀರ್‌ನಿಂದ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ

ಮಹಾರಅಷ್ಟ್ರದ ಕೊಲ್ಲಾಪುರದಲ್ಲಿ ಫಾರ್ಮಸಿ ವಿದ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿ, ಅವರ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಶಾಹಿದ್ ಸಮೀರ್ ಸನಾದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಶಾಹಿದ್ ಸಮೀರ್ ಸನಾದಿ (ಸಂಗ್ರಹ ಚಿತ್ರ)

ಮುಂಬೈ, ಏ. 28: ಮಹಾರಾಷ್ಟ್ರದ ಅಮರಾವತಿಯಲ್ಲಿ ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆಯ ಭೀಕರ ಪ್ರಕರಣ ಬಯಲಾದ ಬೆನ್ನಲ್ಲೇ ಈಗ ಕೊಲ್ಲಾಪುರದಲ್ಲಿ ಅಂತಹದ್ದೇ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಲವು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಫಾರ್ಮಸಿ ವಿದ್ಯಾರ್ಥಿಯನ್ನು ಪೊಲೀಸರಿಂದ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೊಲ್ಲಾಪುರದ ಹಾತಕಣಂಗಲೆ ತಾಲೂಕಿನ ನಿವಾಸಿ 22 ವರ್ಷದ ಶಾಹಿದ್ ಸಮೀರ್ ಸನಾದಿ ಎಂದು ಗುರುತಿಸಲಾಗಿದೆ. ಆರೋಪಿಯ ಆಪ್ತ ಸ್ನೇಹಿತನೊಬ್ಬನಿಗೆ ಈ ಕೃತ್ಯದ ಬಗ್ಗೆ ಮಾಹಿತಿ ದೊರೆತು ಆತ ಅದನ್ನು ಬಹಿರಂಗಪಡಿಸಿದ ನಂತರ ಇಡೀ ಪ್ರಕರಣ ಹೊರಬಂದಿದೆ. ಏಪ್ರಿಲ್ 26ರಂದು 20 ವರ್ಷದ ಸಂತ್ರಸ್ತ ಯುವತಿಯೊಬ್ಬರು ಲೈಂಗಿಕ ಶೋಷಣೆ ಮತ್ತು ಬೆದರಿಕೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯವು ಆತನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಹೆಸರು ಬದಲಾವಣೆ, ಬುರ್ಖಾ ತರಬೇತಿ ಮತ್ತು ಮಲೇಷ್ಯಾ ಉದ್ಯೋಗದ ಆಮಿಷ: ಟಿಸಿಎಸ್ ನಾಸಿಕ್ ಪ್ರಕರಣದಲ್ಲಿ ಹೊಸ ತಿರುವು

ಪೊಲೀಸ್ ದೂರಿನ ವಿವರಗಳ ಪ್ರಕಾರ, ಆರೋಪಿಯು ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರ ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ಅವರನ್ನು ಕೊಲ್ಲಾಪುರ ಮತ್ತು ಶಿರೋಲಿಯ ವಿವಿಧ ಲಾಡ್ಜ್‌ಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಇಷ್ಟೇ ಅಲ್ಲದೆ, ಈ ಕೃತ್ಯಗಳನ್ನು ಗುಪ್ತವಾಗಿ ವಿಡಿಯೊ ಚಿತ್ರೀಕರಿಸಿಕೊಳ್ಳುತ್ತಿದ್ದನು. ಈ ಆಕ್ಷೇಪಾರ್ಹ ವಿಡಿಯೊಗಳನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಲ್ಲದೆ, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಮೂಲಕ ಸಂತ್ರಸ್ತೆಯ ಮೇಲೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂತ್ವ ಸಂಘಟನೆಗಳಾದ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಮತ್ತು ಬಜರಂಗ ದಳವು ಈ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆರೋಪಿಯು ಸುಮಾರು 10ಕ್ಕೂ ಹೆಚ್ಚು ಯುವತಿಯರನ್ನು ಇದೇ ರೀತಿ ಬಲೆಗೆ ಬೀಳಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಿದೆ. ಈ ಸಂಬಂಧ ಸಂಘಟನೆಗಳು ಪೊಲೀಸರಿಗೆ ಮನವಿ ಪತ್ರ ಸಲ್ಲಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿವೆ. ಇತರ ಸಂತ್ರಸ್ತರು ಯಾರಾದರೂ ಇದ್ದರೆ ಧೈರ್ಯದಿಂದ ಮುಂದೆ ಬಂದು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದು, ಸಂತ್ರಸ್ತರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಮರಾವತಿಯಲ್ಲಿ ಇತ್ತೀಚೆಗೆ 180ಕ್ಕೂ ಹೆಚ್ಚು ಬಾಲಕಿಯರನ್ನು ಶೋಷಿಸಿದ್ದ ಪ್ರಕರಣದ ಬೆನ್ನಲ್ಲೇ ಈ ಘಟನೆ ಸಂಭವಿಸಿರುವುದು ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದೆ.