ಬೆಂಗಳೂರು: ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಲಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ಕಾರನ್ನು ವಶಕ್ಕೆ (Lamborghini drifting case) ಪಡೆದುಕೊಂಡಿದ್ದಾರೆ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರು ಡ್ರಿಫ್ಟಿಂಗ್ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅಲ್ಲದೇ ಕಾರಿನ ದಾಖಲೆಗಳು ಯಾರ ಹೆಸರಿನಲ್ಲಿವೆ ಎಂದು ಪರಿಶೀಲಿಸಲು ಆರ್‌ಟಿಒಗೆ ಪೊಲೀಸರು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಕೆಎ05 NR 0009 ನಂಬರಿನ ಲ್ಯಾಂಬೊರ್ಗಿನಿ ಕಾರ್ ಸೀಜ್ ಮಾಡಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಎರಡು ಮೂರು ಬಾರಿ ಕಾರ್ ಡ್ರಿಫ್ಟಿಂಗ್ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆಗಿರುವ ವಿಡಿಯೊದಲ್ಲಿ KA 05 NR 0009 ನೋಂದಣಿ ಸಂಖ್ಯೆಯ ಕಾರು ಸಾರ್ವಜನಿಕ ರಸ್ತೆಯಲ್ಲಿ, ಅದರಲ್ಲೂ ಫ್ಲೈಓವರ್ ಕೆಳಗೆ ಇತರ ವಾಹನಗಳ ಸಂಚಾರವಿರುವಾಗಲೇ 'ಡೋನಟ್' ಸ್ಟಂಟ್‌ಗಳನ್ನು ಮಾಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಜಾಗೃತ ನಾಗರಿಕರೊಬ್ಬರು ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ಮೂಲಕ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದರು.
ವಿಡಿಯೋ ಇಲ್ಲಿದೆ
ಸಾರ್ವಜನಿಕರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆಗಳು ರೇಸ್ ಟ್ರ್ಯಾಕ್‌ಗಳಲ್ಲ ಎಂದು ಕಿಡಿಕಾರಿದ್ದಾರೆ. ಚಾಲಕನ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ಕಠಿಣ ದಂಡ ವಿಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೆ ಕೆಲವರು "ಇದು ಶ್ರೀಮಂತರ ಆಟ, ಪೊಲೀಸರು ಏನೂ ಮಾಡುವುದಿಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಚಾಲಕ ಯಾವುದಾದರೂ ಪ್ರಭಾವಿ ಬಿಲ್ಡರ್ ಅಥವಾ ಶಾಸಕರ ಮಗನಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.