ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಡಿಗೆದಾರನೊಂದಿಗೆ ಸೊಸೆಯ ಲವ್ವಿ-ಡವ್ವಿ; ಪ್ರೇಮಿಯೊಂದಿಗೆ ಸೇರಿ ಅತ್ತೆಯ ಭೀಕರ ಕೊಲೆ

ಉತ್ತರ ಪ್ರದೇಶದ ಲಖನೌನಲ್ಲಿ ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅತ್ತೆಯನ್ನು ಸೊಸೆ ತನ್ನ ಪ್ರೇಮಿಯೊಂದಿಗೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಗಿತಗೊಳಿಸಿ ಉಸಿರುಗಟ್ಟಿಸಿ ಹತ್ಯೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ರಾಜನ್‌, ನಿರ್ಮಲಾ ದೇವಿ ಮತ್ತು ರಂಜನಾ (ಸಂಗ್ರಹ ಚಿತ್ರ)

ಲಖನೌ, ಮಾ. 23: ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಖನೌನಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಸೊಸೆ ತನ್ನ ಪ್ರೇಮಿಯೊಂದಿಗೆ ಸೇರಿ ಅತ್ತೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಲಖನೌನ ನಿಶಾತ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 69 ವರ್ಷದ ನಿರ್ಮಲಾ ದೇವಿ (Nirmala Devi) ಮೃತಪಟ್ಟ ದುರ್ದೈವಿ. ಈ ಸಂಬಂಧ ಮೃತರ ಪುತ್ರ ತ್ರಿದೇಶ್ ನೀಡಿದ ದೂರಿನ ಮೇರೆಗೆ ಪೊಲೀಸರು ಪತ್ನಿ ರಂಜನಾ ಮತ್ತು ಆಕೆಯ ಪ್ರಿಯಕರ, ಬಾಡಿಗೆದಾರ ರಾಜನ್‌ನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ನಿರ್ಮಲಾ ದೇವಿ ತಮ್ಮ ಮಗ ತ್ರಿದೇಶ್, ಸೊಸೆ ರಂಜನಾ ಮತ್ತು ಮೂವರು ಮೊಮ್ಮಕ್ಕಳೊಂದಿಗೆ ಎರಡು ಅಂತಸ್ತಿನ ಮನೆಯ ಕೆಳಮಹಡಿಯಲ್ಲಿ ವಾಸವಾಗಿದ್ದರು. ಮನೆಯ ಮೇಲ್ಭಾಗದ ಕೋಣೆಯನ್ನು ರಾಜನ್ ಎಂಬಾತನಿಗೆ ಬಾಡಿಗೆಗೆ ನೀಡಲಾಗಿತ್ತು. ಮೂರು ವರ್ಷಗಳಿಂದ ರಾಜನ್ ಅಲ್ಲಿ ವಾಸವಿದ್ದ. ಈ ಅವಧಿಯಲ್ಲಿ ರಂಜನಾ ಮತ್ತು ರಾಜನ್ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರ ಮನೆಯವರಿಗೆ ತಿಳಿದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತ್ರಿದೇಶ್ ಕೆಲಸಕ್ಕೆ ಹೋದ ಸಮಯದಲ್ಲಿ ರಾಜನ್ ಮತ್ತು ರಂಜನಾ ಭೇಟಿಯಾಗುತ್ತಿದ್ದರು. ಇದನ್ನು ನಿರ್ಮಲಾ ದೇವಿ ಬಲವಾಗಿ ವಿರೋಧಿಸುತ್ತಿದ್ದರು.

ಬೆಕ್ಕು ಸಾಕಲು ನಿರಾಕರಿಸಿದ ಮನೆಯವರು: ಯುವತಿ ಆತ್ಮಹತ್ಯೆ

ಶನಿವಾರ (ಮಾರ್ಚ್‌ 21) ಮಧ್ಯಾಹ್ನ ತ್ರಿದೇಶ್ ಕೆಲಸಕ್ಕೆ ಹೋಗಿದ್ದಾಗ, 14 ವರ್ಷದ ಮಗ ಆದಿತ್ಯ ಮನೆಗೆ ಬಂದಿದ್ದಾನೆ. ಆಗ ಅಜ್ಜಿಯ ಕೈಕಾಲುಗಳನ್ನು ಕಟ್ಟಿ ಹಾಕಿರುವುದನ್ನು ಕಂಡು, ಕೂಡಲೇ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ತನಿಖೆ ನಡೆಸಿದಾಗ ಹಲವು ಆಘಾತಕಾರಿ ವಿಷಯಗಳು ಹೊರಬಂದಿವೆ.

ಸಂಚು ರೂಪಿಸಿ ಕೊಲೆ

ಪೊಲೀಸ್ ತನಿಖೆಯ ಪ್ರಕಾರ, ಘಟನೆಗೆ ಮೂರು ದಿನಗಳ ಮೊದಲು ನಿರ್ಮಲಾ ದೇವಿ ಮತ್ತು ರಂಜನಾ ನಡುವೆ ಜೋರಾಗಿ ಜಗಳ ನಡೆದಿತ್ತು. ಅಂದಿನಿಂದ ನಿರ್ಮಲಾ ತಾವೇ ಅಡುಗೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಇದರಿಂದ ಕೋಪಗೊಂಡ ರಂಜನಾ ಮತ್ತು ರಾಜನ್, ನಿರ್ಮಲಾ ದೇವಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿ, ಸೀರೆಯಿಂದ ನಿರ್ಮಲಾ ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಅಲ್ಲದೆ, ಪೊಲೀಸರ ದಿಕ್ಕು ತಪ್ಪಿಸಲು ಅವರ ಮೈಮೇಲಿದ್ದ ಆಭರಣಗಳನ್ನು ಕದ್ದು ಬಚ್ಚಿಟ್ಟಿದ್ದರು.

ಶ್ವಾನ ದಳದ ನಾಯಿ ನೇರವಾಗಿ ರಾಜನ್ ಬಳಿ ತೆರಳಿದ್ದು ಪೊಲೀಸರ ಅನುಮಾನಕ್ಕೆ ಪುಷ್ಟಿ ನೀಡಿತು. ಆರಂಭದಲ್ಲಿ ರಾಜನ್ ತಾನು ಸ್ಥಳದಲ್ಲಿ ಇರಲಿಲ್ಲ ಎಂದು ವಾದಿಸಿದರೂ, ಪೊಲೀಸ್ ವಿಚಾರಣೆಯ ವೇಳೆ ಸತ್ಯ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.