ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಯ ಉಡುಪಿನಲ್ಲೇ ನೇಣಿಗೆ ಶರಣಾದ ನವ ದಂಪತಿ; ಪತ್ನಿ 45 ದಿನಗಳ ಗರ್ಭಿಣಿ!

ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಪ್ರೀತಿಸಿ ಮದುವೆಯಾಗಿದ್ದ ನವ ದಂಪತಿ ಮದುವೆ ಉಡುಪಿನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಸುಮಾರು 45 ದಿನಗಳ ಗರ್ಭಿಣಿಯಾಗಿದ್ದ ವಿಷಯ ಬಹಿರಂಗವಾಗಿದ್ದು, ಘಟನೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ದಂಪತಿ

ಭೋಪಾಲ್‌, ಏ. 3: ಪ್ರೀತಿಯಲ್ಲಿ ಒಂದಾಗಿದ್ದ ಯುವ ಜೋಡಿಯೊಂದು ಮದುವೆಯ ಉಡುಪಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಮಧ್ಯ ಪ್ರದೇಶದ (Madhya Pradesh) ಸಾಗರ್ (Sagar) ಜಿಲ್ಲೆಯಲ್ಲಿ ಬುಧವಾರ (ಏಪ್ರಿಲ್‌ 1) ರಾತ್ರಿ ನಡೆದಿದೆ. ಮೃತ ಮಹಿಳೆ ಸುಮಾರು ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದರು ಎಂಬ ವಿಷಯ ಮರಣೋತ್ತರ ಪರೀಕ್ಷೆಯ ವೇಳೆ ಬಯಲಾಗಿದ್ದು, ಈ ದುರಂತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಮೃತರನ್ನು 22 ವರ್ಷದ ರಾಜೇಂದ್ರ (ಗೋಲು) (Rajendra) ಮತ್ತು ಅವರ ಪತ್ನಿ 21 ವರ್ಷದ ಕಾಜಲ್ ಪಟೇಲ್ (Kajal Patel) ಎಂದು ಗುರುತಿಸಲಾಗಿದೆ. ಕಾಜಲ್ ಮದುವೆಯ ಸೀರೆಯನ್ನು ಧರಿಸಿದ್ದರೆ, ರಾಜೇಂದ್ರ ವರನ ಸೂಟ್ ಧರಿಸಿದ್ದರು. ಮನೆಯ ಫ್ಯಾನ್‌ಗೆ ಒಂದೇ ಹಗ್ಗದಲ್ಲಿ ಇಬ್ಬರೂ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ಅತ್ಯಂತ ಸಂತೋಷವಾಗಿ ಜೀವನ ನಡೆಸುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬುಧವಾರ ರಾತ್ರಿ ಎಂದಿನಂತೆ ಕುಟುಂಬದವರೊಂದಿಗೆ ರಾತ್ರಿ ಊಟ ಮುಗಿಸಿದ ದಂಪತಿ ತಮ್ಮ ಕೋಣೆಗೆ ತೆರಳಿದ್ದರು. ಮರುದಿನ ಬೆಳಗ್ಗೆ ಬಹಳ ಹೊತ್ತಾದರೂ ಅವರು ಹೊರಬಾರದಿದ್ದಾಗ, ಅನುಮಾನಗೊಂಡ ರಾಜೇಂದ್ರನ ತಂದೆ ಕೋಣೆಯ ಬಳಿ ಹೋಗಿ ನೋಡಿದ್ದಾರೆ. ಈ ವೇಳೆ ದಂಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪಂಚನಾಮೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರೇಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.

ಸೈಬರ್‌ ವಂಚನೆಗೀಡಾಗಿ 1.28 ಕೋಟಿ ರೂಪಾಯಿ ಕಳೆದುಕೊಂಡ ಭೂಪ!

ತನಿಖೆ ಮತ್ತು ವೈದ್ಯರ ವರದಿ

ಕರ್ತವ್ಯನಿರತ ವೈದ್ಯ ಡಾ. ಪ್ರಶಾಂತ್ ಹಜಾರಿ ಅವರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಇದು ನೇಣು ಹಾಕಿಕೊಂಡಿದ್ದರಿಂದ ಸಂಭವಿಸಿದ ಸಾವು ಎಂದು ತಿಳಿದುಬಂದಿದೆ. ಅಲ್ಲದೆ, ಕಾಜಲ್ ಸುಮಾರು 45 ದಿನಗಳ ಗರ್ಭಿಣಿಯಾಗಿದ್ದರು ಎಂದು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ.

ಸಾಗರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಸಿನ್ಹಾ ಮಾತನಾಡಿ, "ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳಿಲ್ಲ. ಮದುವೆಯ ಉಡುಪಿನಲ್ಲೇ ಈ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ" ಎಂದಿದ್ದಾರೆ.

ರೇಲಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಶರ್ಮ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಎಲ್ಲ ಆಯಾಮಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹಸನ್ಮುಖಿಯಾಗಿದ್ದ ದಂಪತಿಯ ಈ ದಿಢೀರ್ ನಿರ್ಧಾರ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.