ಮಧ್ಯಪ್ರದೇಶ: ಪತಿಯರನ್ನು ಅದಲು ಬದಲು ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಸಹೋದರಿಯರಿಬ್ಬರು ನ್ಯಾಯಾಲಯದ (Madhya Pradesh High Court ) ಮೊರೆ ಹೋದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸ್ವಂತ ಸಹೋದರಿಯರು ತಮ್ಮ ಪತಿಯರನ್ನು ಪರಸ್ಪರ ಬದಲಾಯಿಸುವ ಅವಕಾಶ ಕೊಡುವಂತೆ ಹೈಕೋರ್ಟ್‌ನ (MP high court) ಗ್ವಾಲಿಯರ್ (Gwalior) ಪೀಠದ ಮನವಿ ಮಾಡಿದ್ದಾರೆ. ಇದು ಈಗ ಕೇವಲ ಗ್ವಾಲಿಯರ್ ಮಾತ್ರವಲ್ಲ ದೇಶಾದ್ಯಂತ ಭಾರಿ ಸುದ್ದಿ ಮಾಡಿದೆ. ಆರಂಭದಲ್ಲಿ ಇದು ಅಪಹರಣ ಪ್ರಕರಣವಾಗಿ (Kidnap case) ದಾಖಲಾಗಿದ್ದು, ಬಳಿಕ ಕೌಟುಂಬಿಕ ವಿವಾದವಾಗಿ ಪರಿಗಣಿಸಲ್ಪಟ್ಟಿದೆ.
ಹೆಂಡತಿಯ ತಂಗಿಯ ಪತಿ ತನ್ನ ಪತ್ನಿ ಮತ್ತು ಮಗಳನ್ನು ಅಪಹರಿಸಿದ್ದಾನೆ ಎಂದು ದತಿಯಾ ಮೂಲದ ವ್ಯಕ್ತಿಯೊಬ್ಬ ದೂರು ನೀಡಿದ್ದು, ಇದರ ಆಧಾರದಲ್ಲಿ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಲಾಗಿತ್ತು. ಇದರ ವಿಚಾರಣೆ ವೇಳೆ ಸಹೋದರಿಯರು ತಮ್ಮ ಪತಿಯರನ್ನು ಬದಲಾಯಿಸಲು ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದಾರೆ.
ಹೆಂಡತಿ ಮತ್ತು ಮಗಳನ್ನು ತನ್ನ ಅತ್ತಿಗೆಯ ಪತಿ ಮಾಯಾರಾಮ್ ಅಪಹರಿಸಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಅಪಹರಣಕ್ಕೊಳಗಾದ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಇದರ ಬಳಿಕ ನ್ಯಾಯಾಲಯಕ್ಕೆ ಹಾಜರಾದ ಮಹಿಳೆ ಅನಿರೀಕ್ಷಿತ ಹೇಳಿಕೆ ನೀಡಿದ್ದಾಳೆ.
ವಿಚಾರಣೆ ವೇಳೆ ಆಕೆ ತನ್ನನ್ನು ಯಾರೂ ಕೂಡ ಅಪಹರಿಸಿಲ್ಲ. ಮಾಯಾರಾಮ್ ಅವರೊಂದಿಗೆ ತಾನು ಸ್ವಂತ ಇಚ್ಛೆಯಿಂದ ವಾಸಿಸುತ್ತಿದ್ದು, ಈಗಾಗಲೇ ತಮ್ಮ ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿದರು. ಇದಕ್ಕೆ ಮಾಯಾರಾಮ್ ಅವರ ಪತ್ನಿ ಆಕ್ಷೇಪಿಸದೇ ಅಕ್ಕ ತನ್ನ ಪತಿಯೊಂದಿಗೆ ವಾಸಿಸಲು ಬಯಸಿದರೆ ತನಗೆ ಯಾವುದೇ ಸಮಸ್ಯೆ ಇಲ್ಲ. ತಾನು ತಮ್ಮ ಭಾವನೊಂದಿಗೆ ವಾಸಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು.
ಸಹೋದರಿಯರಿಬ್ಬರು ತಮ್ಮ ಗಂಡಂದಿರೊಂದಿಗೆ ಅತೃಪ್ತರಾಗಿದ್ದು ಪರಸ್ಪರ ಪತಿಯರನ್ನು ವಿನಿಮಯ ಮಾಡಿಕೊಂಡು ಹೊಸ ಜೀವನ ಪ್ರಾರಂಭಿಸಲು ಬಯಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
ಕೊಲೆ ಪ್ರಕರಣಕ್ಕೆ ಸಾಕ್ಷಿ ನೀಡಿದ ಸಾಕು ಗಿಳಿ: ಪತಿಯನ್ನು ಕೊಂದ ಪತ್ನಿಯ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?
ಇಬ್ಬರೂ ಮಹಿಳೆಯರಿಗೆ ಮಕ್ಕಳಿದ್ದಾರೆ. ಅಲ್ಲದೇ ಇಬ್ಬರೂ ಮಹಿಳೆಯರು ವಯಸ್ಕರು ಮತ್ತು ತಮ್ಮದೇ ಆದ ಆಯ್ಕೆಯ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಗಮನಿಸಿದ ನ್ಯಾಯಾಲಯ ಇದು ಅಪಹರಣವಲ್ಲ. ಹಾಗಾಗಿ ಕ್ರಿಮಿನಲ್ ಪ್ರಕರಣವಲ್ಲ. ಆದ್ದರಿಂದ ನ್ಯಾಯಾಲಯವು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸುವುದಾಗಿ ಹೇಳಿದೆ.