ಪಾಟ್ನಾ, ಸೆ. 22: ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಅಪ್ರಾಪ್ತ ಬಾಲಕಿಯ ಮೇಲೆ ಅಮಾನವೀಯವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಪ್ರಮುಖ ಆರೋಪಿ ನಂದನ್ ಯಾದವ್ (Nandan Yadav) ಪೊಲೀಸ್ ಎನ್‌ಕೌಂಟರ್‌ನಲ್ಲಿ (Police Encounter) ಕಾಲಿಗೆ ಗುಂಡೇಟು ತಿಂದು ಗಾಯಗೊಂಡಿದ್ದಾನೆ. ಮಂಗಳವಾರ (ಸೆಪ್ಟೆಂಬರ್ 22) ನಡೆದ ಈ ಕಾರ್ಯಾಚರಣೆಯಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಹರೇರಾಮ್ ಯಾದವ್ (Hareram Yadav) ಕೂಡ ಕಾಲಿಗೆ ಪೆಟ್ಟಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಸೆಪ್ಟೆಂಬರ್ 19ರ ಸಂಜೆ ಕೋಚಿಂಗ್ ತರಗತಿಯಿಂದ ಹಿಂದಿರುಗುತ್ತಿದ್ದ ಬಾಲಕಿ ಮತ್ತು ಆಕೆಯ ಸಹಪಾಠಿ ಬಾಲಕ ಪ್ರಸಿದ್ಧ ಮಧ್ವಾ ಪಹಾಡ್ ಬೆಟ್ಟಕ್ಕೆ ತೆರಳಿದ್ದಾಗ ಈ ಘಟನೆ ನಡೆದಿತ್ತು. ದುಷ್ಕರ್ಮಿಗಳ ಗುಂಪು ಇವರ ಸ್ಕೂಟರ್ ತಡೆದು ಕೆಳಗಿಳಿಸಿತ್ತು. ಬಾಲಕನಿಗೆ ಕಪಾಳಮೋಕ್ಷ ಮಾಡಿ ಮನೆಯವರಿಗೆ ಕರೆ ಮಾಡಲು ಒತ್ತಾಯಿಸಿದ ಪುಂಡರು, ಬಾಲಕಿ ಕೈಮುಗಿದು ಬಿಟ್ಟುಬಿಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಬಿಡದೆ ಹಿಂಬಾಲಿಸಿದ್ದರು. ಬಾಲಕಿಯನ್ನು ಎಳೆದಾಡಿ, ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದ ಆಘಾತಕಾರಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೇಶವ್ಯಾಪಿ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು.
ಜಮುಯಿ ಲೈಂಗಿಕ ದೌರ್ಜನ್ಯ ಕೇಸ್: ಘಟನೆ ಕುರಿತು ನಾಲಿಗೆ ಹರಿಬಿಟ್ಟ ಬಿಹಾರ ಸಚಿವ!
ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ಜಮುಯಿ ಎಸ್‌ಡಿಪಿಒ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದ್ದರು. ಆರಂಭದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ನಂದನ್ ಯಾದವ್ ಹಾಗೂ ಹರೇರಾಮ್ ಯಾದವ್ ಅವರನ್ನು ಹಿಡಿಯಲು ಹೋದಾಗ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರ ಕಾಲಿಗೆ ಗಾಯಗಳಾಗಿದ್ದು, ಸದ್ಯ ಪೊಲೀಸರು ಮುಂದಿನ ಕಾನೂನು ಕ್ರಮ ಮುಂದುವರಿಸಿದ್ದಾರೆ.
ಈ ಅಮಾನವೀಯ ಕೃತ್ಯವು ತೀವ್ರ ರಾಜಕೀಯ ಸಂಘರ್ಷಕ್ಕೂ ನಾಂದಿ ಹಾಡಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು. "ಇದು ನಮ್ಮ ಸಂಸ್ಕೃತಿಯಲ್ಲ, ಬದಲಿಗೆ ಹೆಣ್ಣುಮಕ್ಕಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪುರುಷಪ್ರಧಾನ ಮನಸ್ಥಿತಿ. ವಿಡಿಯೊದಲ್ಲಿರುವ ಪ್ರತಿಯೊಬ್ಬರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಆಗ್ರಹಿಸಿದ್ದರು. ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಬಿಹಾರದ ಎನ್‌ಡಿಎ ಸರ್ಕಾರದ ಕಾನೂನು ಸುವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ವಿರೋಧ ಪಕ್ಷಗಳ ದಾಳಿಗೆ ಪ್ರತ್ಯುತ್ತರ ನೀಡಿದ್ದ ಜೆಡಿಯು ಬಿಹಾರ ರಾಜ್ಯಾಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹಾ, "2005ರ ಹಿಂದಿನ ಆರ್‌ಜೆಡಿ ಆಡಳಿತದ ಕಾನೂನು ಸುವ್ಯವಸ್ಥೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ನಮ್ಮ ಸರ್ಕಾರವು ಇಂತಹ ಪ್ರತ್ಯೇಕ ಘಟನೆಗಳ ಬಗ್ಗೆ ಅತ್ಯಂತ ಸೂಕ್ಷ್ಮವಾಗಿದ್ದು, ತಪ್ಪಿತಸ್ಥರನ್ನು ಪೊಲೀಸರು ಶೀಘ್ರದಲ್ಲೇ ಹೆಡೆಮುರಿ ಕಟ್ಟಲಿದ್ದಾರೆ" ಎಂದು ಸಮರ್ಥಿಸಿಕೊಂಡಿದ್ದರು. ಇದೀಗ ಪ್ರಮುಖ ಆರೋಪಿಯ ಮೇಲೆ ನಡೆದಿರುವ ಎನ್‌ಕೌಂಟರ್ ಮೂಲಕ ಬಿಹಾರ ಪೊಲೀಸರು ಕಠಿಣ ಸಂದೇಶ ರವಾನಿಸಿದ್ದಾರೆ.