Pune Horror: ಪುಣೆ ಅತ್ಯಾಚಾರ ಪ್ರಕರಣ; 75 ಗಂಟೆಗಳ ಬಳಿಕ ಆರೋಪಿ ಬಂಧನ
ಪುಣೆಯ ಸ್ವರ್ಗೇಟ್ ಡಿಪೋದಲ್ಲಿ ನಿಂತಿರುವ ಸರ್ಕಾರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪುಣೆ ಅಪರಾಧ ವಿಭಾಗ ಶುಕ್ರವಾರ ಬಂಧಿಸಿದೆ . ಸುಮಾರು 75 ಗಂಟೆಗಳ ಕಾಲ ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿ, ಶಿರೂರ್ ತಹಸಿಲ್‌ನಿಂದ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ದತ್ತಾತ್ರಯ ರಾಮದಾಸ್ ಗಡೆ

ಮುಂಬೈ: ಪುಣೆಯ ಸ್ವರ್ಗೇಟ್ ಡಿಪೋದಲ್ಲಿ ನಿಂತಿರುವ ಸರ್ಕಾರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ (Pune Horror) ಎಸಗಿದ ಆರೋಪಿಯನ್ನು ಪುಣೆ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ . ಮಂಗಳವಾರ ಘಟನೆ ನಡೆದಾಗಿನಿಂದ ಆರೋಪಿ ಹುಡುಕಾಟ ನಡೆಯುತ್ತಿತ್ತು. ಬಂಧಿತ ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದೆ. ಸುಮಾರು 75 ಗಂಟೆಗಳ ಕಾಲ ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿ, ಶಿರೂರ್ ತಹಸಿಲ್‌ನಿಂದ ಆರೋಪಿಯನ್ನು ಬಂಧಿಸಿದ್ದಾರೆ.
ಫೆ. 25ರ ಬೆಳಗ್ಗೆ ಮಹಿಳೆ ಪ್ಲಾಟ್‌ಫಾರ್ಮ್‌ನಲ್ಲಿ ಪೈಥಾನ್‌ಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಮಹಿಳೆ ಬಳಿಗೆ ಬಂದು ಸಹೋದರಿ ಎಂದು ಕರೆದು ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿದ್ದಾನೆ. ಆಕೆಯನ್ನು ನಿಲ್ದಾಣದ ಆವರಣದಲ್ಲಿ ಬೇರೆಡೆ ನಿಲ್ಲಿಸಿದ್ದ ಶಿವಶಾಹಿ ಎಸಿ ಬಸ್ಸಿನ ಬಳಿಗೆ ಕರೆದೊಯ್ದಿದ್ದಾನೆ. ನಂತರ ಬಸ್ಸಿನೊಳಗಿನ ದೀಪಗಳು ಉರಿಯದ ಕಾರಣ ಮೊದಲು ಬಸ್ ಹತ್ತಲು ಹಿಂಜರಿದಳು, ಆದರೆ ಆ ವ್ಯಕ್ತಿ ಅದು ಸರಿಯಾದ ವಾಹನ ಎಂದು ಮನವೊಲಿಸಿ ಒಳಗೆ ಹೋಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ.ಅಲ್ಲದೇ ಈ ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.
ತನಿಖೆ ಪ್ರಾರಂಭಿಸಿದ ಪೊಲೀಸ್ ತಂಡ ಆರೋಪಿಯನ್ನು ಪತ್ತೆ ಮಾಡಲು ಎಲ್ಲಾ ಬಸ್ ಹಾಗೂ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ತಂಡಗಳನ್ನು ನಿಯೋಜಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿ ತನ್ನ ಗ್ರಾಮಕ್ಕೆ ತೆರಳಿದ್ದಾನೆ ಎಂಬುದನ್ನು ಪತ್ತೆ ಮಾಡಿತ್ತು. ಪುಣೆ ನಗರ ಮತ್ತು ಗ್ರಾಮೀಣ ಗ್ರಾಮೀಣ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುನಾತ್ ಗ್ರಾಮದ ಸುತ್ತಮುತ್ತಲಿನ ಪ್ರದೇಶವನ್ನು ಶೋಧಿಸಿ, ಶಂಕಿತನನ್ನು ಪತ್ತೆಹಚ್ಚಲು ಡ್ರೋನ್‌ಗಳು ಮತ್ತು ಶ್ವಾನ ದಳವನ್ನು ನಿಯೋಜಿಸಲಾಯಿತು. ಅಂತಿಮವಾಗಿ ಶುಕ್ರವಾರ ಮುಂಜಾನೆ ಆರೋಪಿಯನ್ನು ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Pune Horror: ಪೊಲೀಸ್ ಸ್ಟೇಷನ್ ಸಮೀಪವೇ ಬಸ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ- ಬಸ್ ಸ್ಟ್ಯಾಂಟ್ ಭದ್ರತಾ ಕಚೇರಿ ಧ್ವಂಸ!
ಆರೋಪಿಯು ಹಲವಾರು ತಿಂಗಳುಗಳಿಂದ ಪೊಲೀಸರ ಸೋಗಿನಲ್ಲಿ ಓಡಾಡಿಕೊಂಡಿದ್ದ ಎಂದು ಹೇಳಲಾಗಿದೆ. ಆತನ ವಿರುದ್ಧ ಪುಣೆ ಮತ್ತು ಅಹಲ್ಯಾನಗರ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಆತ 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.