ರಾಂಚಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ವೀರೇಂದ್ರ ಮಾಂಝಿ (30), ಅವರ ಪತ್ನಿ ಆರತಿ ಕುಮಾರಿ (26), ಅವರ ಪುತ್ರಿ ರುಹಿ ಕುಮಾರಿ (4) ಮತ್ತು ಪುತ್ರ ವಿರಾಜ್ ಕುಮಾರ್ (2) ಎಂದು ಗುರುತಿಸಲಾಗಿದೆ ಎಂದು ಹನ್ಸ್‌ದಿಹಾ ಪೊಲೀಸ್ ಠಾಣಾಧಿಕಾರಿ ತಾರಾಚಂದ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆ ವ್ಯಕ್ತಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ವ್ಯಕ್ತಿ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ನಂತರ ನೇಣು ಬಿಗಿದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ನಮ್ಮ ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಮತ್ತು ಇಬ್ಬರು ಮಕ್ಕಳು ಮನೆಯೊಳಗೆ ಪತ್ತೆಯಾಗಿದ್ದರೆ, ಪುರುಷ ಮನೆಯ ಹೊರಗೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಾಲ್ವರು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ದುಮ್ಕಾದ ಫುಲೋ-ಜಾನೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ವರದಿಗಳಿಗಾಗಿ ಕಾಯಲಾಗುತ್ತಿದೆ. ವ್ಯಕ್ತಿ ರಾತ್ರಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಗ್ರಾಮಸ್ಥರು ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಮನೆಯ ಕೋಣೆಯೊಳಗೆ ಹೆಂಡತಿ ಮತ್ತು ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿವೆ. ಘಟನೆ ನಡೆಯುವ ಒಂದು ದಿನ ಮೊದಲು ವೀರೇಂದ್ರ ಅವರ ಪತ್ನಿ ಮತ್ತು ಮಕ್ಕಳು ಅವರ ಅತ್ತೆ-ಮಾವನ ಮನೆಯಿಂದ ಹಿಂತಿರುಗಿದ್ದರು ಮತ್ತು ದಂಪತಿಗಳ ಕಿರಿಯ ಮಗ ವಿರಾಜ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಚಿಕಿತ್ಸೆ ಹಣವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಊಹಿಸಲಾಗಿದೆ.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಪ್ರತ್ಯೇಕ ಘಟನೆಯಲ್ಲಿ, ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ. ಮೃತರನ್ನು ವಿಠ್ಠಲ ಶಿಂಧೆ(75), ಅವರ ಪುತ್ರ ನಾರಾಯಣ ಶಿಂಧೆ(38) ಮೊಮ್ಮಕ್ಕಳಾದ ಶಿವರಾಜ(12), ಶ್ರೀನಿಧಿ(10) ಎಂದು ಗುರುತಿಸಲಾಗಿದೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಹೇಳಲಾಗಿದೆ. ಸದ್ಯ ಪ್ರಕರಣ ಸಂಬಂಧ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.