ಬೆಂಗಳೂರು: ಪರವಾನಗಿ ಇಲ್ಲದೆ ಅಕ್ರಮವಾಗಿ ಏಳು ಜೀವಂತ ಗುಂಡುಗಳನ್ನು (Live bullet) ಹೊಂದಿದ್ದ ಆರೋಪದ ಮೇಲೆ ಅಮೆರಿಕ ಮೂಲದ ಅನಿವಾಸಿ ಭಾರತೀಯನೊಬ್ಬನನ್ನು (NRI) ಬೆಂಗಳೂರಿನ ಜೆ.ಸಿ. ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅಮೆರಿಕದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಅರ್ಮಾನ್ ಮುತಾಹರ್ (34) ಎಂದು ಗುರುತಿಸಲಾಗಿದೆ. ಅರ್ಮಾನ್ ಏಪ್ರಿಲ್ 27 ರಂದು ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಕೊಠಡಿ ಪಡೆದಿದ್ದನು. ಏಪ್ರಿಲ್ 28 ರಂದು ಆತ ಕೊಠಡಿಯನ್ನು ಖಾಲಿ ಮಾಡಿ ತೆರಳಿದ್ದನು.
ಹೋಟೆಲ್‌ನಿಂದ ಹೊರಟ ನಂತರ ಆರೋಪಿ ಹೋಟೆಲ್ ಸಿಬ್ಬಂದಿಗೆ ಕರೆ ಮಾಡಿ, ತಾನು ತಂಗಿದ್ದ ಕೊಠಡಿಯಲ್ಲಿ 7 ಜೀವಂತ ಗುಂಡುಗಳಿರುವ 'ರೂಗರ್' ಕಂಪನಿಯ ಮ್ಯಾಗಜೀನ್ ಅನ್ನು ಮರೆತು ಬಿಟ್ಟಿರುವುದಾಗಿ ತಿಳಿಸಿದ್ದನು. ಹೋಟೆಲ್ ಮ್ಯಾನೇಜರ್ ನೀಡಿದ ದೂರಿನನ್ವಯ ಜೆ.ಸಿ. ನಗರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ವಿಚಾರಣೆಗಾಗಿ ನ್ಯಾಯಾಲಯವು ಆರೋಪಿಯನ್ನು ಮೇ 7 ರಿಂದ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ತನಿಖೆಯ ಭಾಗವಾಗಿ ಆತನ ಪಾಸ್‌ಪೋರ್ಟ್, ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ವಿಚಾರಣೆ ವೇಳೆ ಆರೋಪಿ, ಆರ್.ಟಿ. ನಗರದಲ್ಲಿರುವ ತನ್ನ ಸಹೋದರಿಯನ್ನು ಭೇಟಿ ಮಾಡಲು ಭಾರತಕ್ಕೆ ಬರುವಾಗ ಆಕಸ್ಮಿಕವಾಗಿ ಲಗೇಜ್‌ನಲ್ಲಿ ಈ ಮ್ಯಾಗಜೀನ್ ಬಂದಿರುವುದಾಗಿ ಹೇಳಿದ್ದಾನೆಂದು ತಿಳಿದುಬಂದಿದೆ.
ಸುವೇಂದು ಅಧಿಕಾರಿ ಸಹಾಯಕನ ಹತ್ಯೆ ಪ್ರಕರಣ: ಘಾಜಿಪುರದ ವ್ಯಕ್ತಿಯ ಬಂಧನ
ಪ್ರಕರಣ ದಾಖಲಿಸಿಕೊಂಡು ಅರ್ಮಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮ್ಯಾಗ್‌ಜೈನ್ ತನ್ನದೇ ಎಂದು ಒಪ್ಪಿಕೊಂಡಿದ್ದ. ಜತೆಗೆ, ತಾನು ಅಮೆರಿಕಾದ ಇಂಡಿಯಾನದಲ್ಲಿ ವಾಸವಿದ್ದು, ಅಲ್ಲಿ ಮೂರು ವರ್ಷ ವಾಯುಸೇನೆಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿದ್ದೆ ಎಂದು ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಯಾವುದೇ ಪರವಾನಗಿ ಇಲ್ಲದೆ, ಮೂರು ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣಗಳ ಅತ್ಯಂತ ಕಟ್ಟುನಿಟ್ಟಿನ ಭದ್ರತಾ ತಪಾಸಣೆಗಳನ್ನು ದಾಟಿ ಈತ ಬೆಂಗಳೂರಿಗೆ ಜೀವಂತ ಗುಂಡುಗಳನ್ನು ತಂದಿದ್ದು ಹೇಗೆ ಎಂಬುದನ್ನು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.