ಬೆಂಗಳೂರು: ವಿಧಾನ ಸೌಧವನ್ನು ಸ್ಫೋಟಿಸುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ವ್ಯಕ್ತಿಯೊಬ್ಬ ಬೆಂಗಳೂರು ವಿಧಾನಸೌಧವನ್ನು ಸ್ಫೋಟಿಸುವಂತೆ ಮಾಡಿರುವ ವಿಡಿಯೊವನ್ನು ಅಕ್ಟೋಬರ್ 20 ರಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದನು. ಇದು ಭಾರಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ತನಿಖೆಯನ್ನು ಆರಂಭಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಸ್ಪಷ್ಟನೆಯನ್ನು ನೀಡಿದ ಪೊಲೀಸರು, ಇಂತಹ ಯಾವುದೇ ಘಟನೆ ನಡೆದಿಲ್ಲ. ಇದೊಂದು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಿರುವುದಾಗಿದೆ ಎಂದು ದೃಢಪಡಿಸಿದ್ದಾರೆ.
ಬೆಂಗಳೂರು ವಿಧಾನಸೌಧ ಸ್ಪೋಟಗೊಂಡಂತೆ ತೋರಿಸುವ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾದ ವಿಡಿಯೊವನ್ನು ಹಂಚಿಕೊಂಡ ಆರೋಪದ ಮೇಲೆ ಬಿಹಾರ ಮೂಲದ 25 ವರ್ಷದ ವಲಸೆ ಕಾರ್ಮಿಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪ್ಲಂಬರ್ ಆಗಿ ದಿನಗೂಲಿ ಕೆಲಸ ಮಾಡುತ್ತಿದ್ದ ಹಜರತ್ ಅಲಿ ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅಕ್ಟೋಬರ್ 20ರಂದು ವೈರಲ್ ಆಗಿರುವ ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಕೈಯಿಂದ ಬಂದೂಕಿನ ಟ್ರಿಗರ್ ಎಳೆಯುವಂತೆ ನಟಿಸಿರುವುದನ್ನು ಕಾಣಬಹುದು. ತಕ್ಷಣವೇ ಒಂದು ಸ್ಫೋಟ ಸಂಭವಿಸಿ ವಿಧಾನಸೌಧ ಕಟ್ಟಡವೇ ನಾಶವಾದಂತೆ ದೃಶ್ಯಗಳನ್ನು ಸೃಷ್ಟಿಸಲಾಗಿದೆ.
ತಾನೇ ಕಟ್ಟಡವನ್ನು ಸ್ಫೋಟಿಸಿದ್ದೇನೆ ಎಂದು ಹೇಳುವ ಶೀರ್ಷಿಕೆಯಡಿ 'Jnx king Hg' ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೊವನ್ನು ಹಂಚಲಾಗಿತ್ತು. ಈ ವೈರಲ್ ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅನೇಕರು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ, ಇದಕ್ಕೆ ಕಾರಣರಾದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸದ್ಯ ಆ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.
ಅತ್ಯಂತ ಬಿಗಿ ಭದ್ರತೆಯುಳ್ಳ ಸರ್ಕಾರಿ ಕಟ್ಟಡವಾಗಿರುವ ವಿಧಾನಸೌಧದ ಮೇಲೆ ದಾಳಿ ನಡೆದಂತೆ ಬಿಂಬಿಸುವ ನಕಲಿ ವಿಡಿಯೊಗಳನ್ನು ಸೃಷ್ಟಿಸುವುದು ಮತ್ತು ಹಂಚುವುದು ಸಾರ್ವಜನಿಕರಲ್ಲಿ ಆತಂಕ ಹಾಗೂ ಭದ್ರತಾ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ದೂರುಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಉದ್ದೇಶವೇನು ಎಂಬುದನ್ನು ತಿಳಿಯಲು ವಿಚಾರಣೆ ನಡೆಸುತ್ತಿದ್ದಾರೆ.