ಲಖನೌ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಗೆಳತಿ ತನಗೆ ನಂಬಿಕೆ ದ್ರೋಹ ಮಾಡಿದಳೆಂಬ ಕಾರಣಕ್ಕೆ (Man kills 'unfaithful girlfriend) 17 ವರ್ಷದ ಬಾಲಕಿಯನ್ನು ಕತ್ತು ಸೀಳಿ ಕೊಲೆಗೈದಿದ್ದಾನೆ. ಕಾನ್ಪುರ ಮೂಲದ ಶಿವಂ ವರ್ಮಾ ಎನ್ನುವ ವ್ಯಕ್ತಿ ಈ ಕೃತ್ಯ ಎಸಗಿದ್ದು ತನ್ನ ಬಾಡಿಗೆ ಮನೆಗೆ ಪ್ರೇಯಸಿಯನ್ನು ಬರಹೇಳಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆ ಬಳಿಕ ತನ್ನ ಪ್ರೇಯಸಿಯ ಸ್ನೇಹಿತನಿಗೆ ಕರೆ ಮಾಡಿ ತಪ್ಪೊಪ್ಪಿಕೊಂಡು ಪರಾರಿಯಾಗಿದ್ದಾನೆ. ಸದ್ಯ ಈ ಬಗ್ಗೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದು, ಕೃತ್ಯ ಎಸಗಿದವನ ಹುಡುಕಾಟದಲ್ಲಿ ಇದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಮಾರುಕಟ್ಟೆಗೆ ಹೋಗಿದ್ದಳು. ಆ ವೇಳೆಯ ಆಕೆಯ ಪ್ರಿಯಕರ ಶಿವಂ ವರ್ಮಾ ಎಂಬಾತನೂ ಬೈಕಿನಲ್ಲಿ ಮಾರುಕಟ್ಟೆಗೆ ಬಂದಿದ್ದು, ಆಕೆಯನ್ನು ತನ್ನ ಬಾಡಿಗೆ ಮನೆಗೆ ಕರೆದಿದ್ದಾನೆ. ಅದರಂತೆ ಸಂತ್ರಸ್ತೆ ಅವನೊಂದಿಗೆ ತೆರಳಿದ್ದು ತನ್ನ ಬಾಡಿಗೆ ಮನೆಯಲ್ಲೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಇದಾಗಿ ಒಂದು ಗಂಟೆಯ ಬಳಿಕ ತನ್ನ ಪ್ರೇಯಸಿಯ ಗೆಳೆಯನಿಗೆ ಕರೆ ಮಾಡಿ ಈಕೆ ನಂಬಿಕೆ ದ್ರೋಹಿ ಅವಳಿಗೆ ತನ್ನ ಸೌಂದರ್ಯದ ಬಗ್ಗೆ ಬಹಳ ಅಹಂಕಾರ ಇದೆ. ಹಾಗಾಗಿ ನಿನ್ನ ಸ್ನೇಹಿತೆಯನ್ನು ತಾನು ಕೊಂದೆ ಎಂದು ಹೇಳಿ ಕಾಲ್ ಕಟ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.
ಕೊಲೆಯಾದ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಸ್ನೇಹಿತ ಬಾಡಿಗೆ ಮನೆಗೆ ತೆರಳಿದ್ದು, ಅಲ್ಲಿ ರಕ್ತ ಸಿಕ್ತ ಮಡುವಿನಲ್ಲಿ ಗೆಳತಿ ಬಿದ್ದಿದ್ದನ್ನು ನೋಡಿದ್ದಾನೆ. ಈ ಬಗ್ಗೆ ಸ್ನೇಹಿತೆಯ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಸಂತ್ರಸ್ತೆಯ ತಂದೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು ಕೊಲೆ ಮಾಡಿದ್ದ ಸ್ಥಳದಲ್ಲಿ ಚಾಕು ಮತ್ತು ಇತರ ಪುರಾವೆಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು ಆಕೆಯ ಕುಟುಂಬಸ್ಥರು ಈ ಘಟನೆ ಕುರಿತಂತೆ ಪ್ರತಿಭಟಿಸಿದ್ದಾರೆ.
ಇದನ್ನು ಓದಿ: Crime News: ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಉದ್ಯಮಿಯ ಶವ ಪತ್ತೆ
ಶಿವಂ ವರ್ಮಾ ಬಾಡಿಗೆ ಮನೆಗೆ ಬಾಲಕಿಯನ್ನು ಕರೆತಂದ ವಿಚಾರ ಮನೆ ಮಾಲಿಕನಿಗೆ ತಿಳಿದಿದ್ದರೂ ಆತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆಯ ತಂದೆ ಪೊಲೀಸರ ಬಳಿ ಹೇಳಿದ್ದಾರೆ. ಸಂತ್ರ ಸ್ತೆಯ ತಂದೆ ಶಿವಂ ವರ್ಮಾಳ ತನಗೆ ಯಾವುದೇ ಪರಿಚಯ ಇಲ್ಲ, ತನ್ನ ಮಗಳಿಗೆ ಈ ಬಗ್ಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಸಂತ್ರಸ್ತೆಯ ಮೃತದೇಹವನ್ನು ವಿಧಿವಿಜ್ಞಾನ ತಂಡ ಪರೀಕ್ಷೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆ ಬಳಿಕವೇ ಇನ್ನಷ್ಟು ಕ್ಷಿಪ್ರ ರೀತಿಯಲ್ಲಿ ತನಿಖೆ ಮುಂದು ವರೆಸುವುದಾಗಿ ಇಲ್ಲಿನ ಡಿಸಿಪಿ ಆಶಿಶ್ ಶ್ರೀವಾಸ್ತವ ಆಜ್ ತಕ್‌ಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಕ್ಷುಲಕ ಕಾರಣಕ್ಕೆ ಹದಿಹರೆಯದ ಯುವತಿ ಬಲಿಯಾಗಿದ್ದು ಆಕೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.