ತುಮಕೂರು: ತುಮಕೂರಿನಲ್ಲಿ ಭೀಕರ ಕೊಲೆ ನಡೆದಿದ್ದು, ಪತಿ-ಪತ್ನಿ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ (Tumkur Murder Case) ನಡೆದಿದೆ. ಜಗಳದ ವೇಳೆ ಪತಿ ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಪತ್ನಿಗೆ ಇರಿದು ಕೊಲೆ ಮಾಡಿರುವುದು ತುಮಕೂರಿನ ಅಂತರಸನಹಳ್ಳಿಯಲ್ಲಿ ನಡೆದಿದೆ. ಗೀತಾ (20) ಕೊಲೆಯಾದ ಮಹಿಳೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಎರಡು ವರ್ಷದ ಹಿಂದೆಯಷ್ಟೇ ನವೀನ್‌ನನ್ನು ಗೀತಾ ಮದುವೆಯಾಗಿದ್ದಳು. ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು. ಮನೆಯಲ್ಲಿ ದಂಪತಿಯ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಮನೆಯ ಮಾಲೀಕ ಬಾಡಿಗೆ ಪಡೆಯಲೆಂದು ಮನೆಯ ಬಳಿ ಬಂದಿದ್ದರು. ಈ ವೇಳೆ ರಕ್ತದ ಮಾಡಿವಿನಲ್ಲಿ ನವೀನ್ ಪತ್ನಿ ಗೀತಾ ಬಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ತಕ್ಷಣ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ನವೀನ್ ಪತ್ನಿ ಗೀತಾಳನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕುತ್ತಿಗೆ ಮುಖಕ್ಕೆ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ನವೀನ್ ಇರಿದಿದ್ದಾನೆ. ಸದ್ಯ ಪೊಲೀಸರು ಆರೋಪಿ ನವೀನ್ ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೌಟುಂಬಿಕ ಕಲಹಕ್ಕೆ ಬೇಸತ್ತು ಪಿಎಸ್‍ಐ ಆತ್ಮಹತ್ಯೆ; ಮೂರು ಪುಟದ ಡೆತ್ ನೋಟ್ ಲಭ್ಯ

ತುಮಕೂರು: ನಗರದ ಲಾಡ್ಜ್‌ವೊಂದರಲ್ಲಿ ದಾವಣಗೆರೆಯ ಪಿಎಸ್ ಐ (PSI) ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಸಬ್ ಇನ್ಸ್ಪೆಕ್ಟರ್ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜು, ಜುಲೈ 1ರಂದು ತುಮಕೂರು ನಗರದದಲ್ಲಿರುವ ದ್ವಾರಕಾ ಹೋಟೆಲ್ ಲಾಡ್ಜ್ ನಲ್ಲಿ ನಾಲ್ಕನೇ ಮಹಡಿಯಲ್ಲಿರುವ ರೂಮ್ ಬಾಡಿಗೆ ಪಡೆದುಕೊಂಡಿದ್ದು, ಅಲ್ಲೇ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದಾವಣಗೆರೆ ತಾಲೂಕಿನ ಜವಳಘಟ್ಟ ಗ್ರಾಮದ ನಿವಾಸಿಯಾಗಿದ್ದ ನಾಗರಾಜಪ್ಪ, ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಿದ್ದರು. ಜುಲೈ 1 ರಂದು ದ್ವಾರಕ ಹೋಟೆಲ್ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಇಂದು ಲಾಡ್ಜ್ ನಲ್ಲಿ ದುರ್ವಾಸನೆ ಬಂದಿದ್ದು, ಸಿಬ್ಬಂದಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ನಾಗರಾಜು ಅವರು ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಪೊಲೀಸರು ತನಿಕೆ ಕೈಗೊಂಡಿದ್ದಾರೆ. ಸುಮಾರು ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ . ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನನ್ನದೇ ನಿರ್ಧಾರ ಎಂದು ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಜೀವನದ ಕುರಿತು ಸುದೀರ್ಘವಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ. ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಅಲ್ಲದೇ ಹೋಟೆಲ್ ಮಾಲೀಕರಿಗೂ ಡೆತ್‍ನೋಟ್‍ನಲ್ಲಿ ಕ್ಷಮೆ ಕೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Self Harming: ಶುಲ್ಕ ನೀಡುವಂತೆ ಶಾಲೆಯಲ್ಲಿ ಕಿರುಕುಳ; ಮನನೊಂದು SSLC ವಿದ್ಯಾರ್ಥಿನಿ ಆತ್ಮಹತ್ಯೆ
ಅಳಿಯ ಹಾಗೂ ಮಗಳ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ಅವರು ನನ್ನ ಅಳಿಯ ಮಗನಂತೆ, ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಶರಣಾಗಿರುವ ಪಿಎಸ್ ಐ ಅವರು ಇನ್ನೇನು ಒಂದುವರೆ ವರ್ಷದಲ್ಲೇ ಕರ್ತವ್ಯದಿಂದ ನಿವೃತ್ತಿಯಾಗಬೇಕಿತ್ತು. ಸದ್ಯ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.